Ticker

6/recent/ticker-posts
Responsive Advertisement

Bank Of Baroda: ಬ್ಯಾಂಕ್ ಆಫ್ ಬರೋಡಾ ಪೆರ್ನೆ ಶಾಖೆಯಲ್ಲಿ 70 ಲಕ್ಷ ವಂಚನೆ

Perne
ಬಂಟ್ವಾಳ ತಾಲೂಕಿನ ಪೆರ್ನೆ ಗ್ರಾಮದಲ್ಲಿರುವ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಭಾರೀ ಹಣಕಾಸು ವಂಚನೆಯೊಂದು ಬೆಳಕಿಗೆ ಬಂದಿದೆ. ಶಾಖೆಯ ಮ್ಯಾನೇಜರ್ ಆಗಿದ್ದ ಸುಬ್ರಹ್ಮಣ್ಯಂ (30) ಎಂಬಾತ, ಎಟಿಎಂ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ದುರುಪಯೋಗಪಡಿಸಿಕೊಂಡು ಲಕ್ಷಾಂತರ ರೂಪಾಯಿ ನಗದು ಹಾಗೂ ಚಿನ್ನಾಭರಣಗಳನ್ನು ವಂಚಿಸಿ ಪರಾರಿಯಾಗಿರುವುದು ತನಿಖೆಯಿಂದ ತಿಳಿದುಬಂದಿದೆ.

ಮಾಹಿತಿಯಂತೆ, 06-02-2024 ರಿಂದ 16-12-2025ರವರೆಗೆ ಎಟಿಎಂಗೆ ನಿಗದಿತವಾಗಿ ಜಮಾ ಮಾಡಬೇಕಿದ್ದ ಹಣವನ್ನು ಜಮಾ ಮಾಡದೆ, ಒಟ್ಟು ರೂ.70,86,000 ನಗದನ್ನು ಮುಳುಗಿಸಿದ್ದಾನೆ ಎನ್ನಲಾಗಿದೆ. ಬಳಿಕ 17-12-2025ರಂದು ಯಾವುದೇ ಮಾಹಿತಿ ನೀಡದೇ ಕೆಲಸಕ್ಕೆ ಬಾರದೆ ಪರಾರಿಯಾಗಿದ್ದಾನೆ. ಈ ವಿಷಯ ತಿಳಿದ ಬಳಿಕ ಹಿರಿಯ ಅಧಿಕಾರಿಗಳು 19-12-2025ರಂದು ಪೆರ್ನೆ ಶಾಖೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪರಿಶೀಲನೆಯ ವೇಳೆ ಬ್ಯಾಂಕ್ ಸೇಫ್ ಲಾಕರ್‌ನಲ್ಲಿದ್ದ ಸುಮಾರು ರೂ.55,000 ಮೌಲ್ಯದ 4.400 ಗ್ರಾಂ ಚಿನ್ನಾಭರಣವೂ ಕಾಣೆಯಾಗಿರುವುದು ಪತ್ತೆಯಾಗಿದೆ. ಈ ಮೂಲಕ ಪರಾರಿಯಾದ ಮ್ಯಾನೇಜರ್ ನಡೆಸಿರುವ ಒಟ್ಟು ವಂಚನೆಯ ಮೊತ್ತ ರೂ.71,41,000 ಎಂದು ಅಂದಾಜಿಸಲಾಗಿದೆ. ಈ ಕುರಿತು ಬ್ಯಾಂಕ್‌ನ ಪ್ರಾದೇಶಿಕ ವ್ಯವಸ್ಥಾಪಕರಾದ ಶ್ರೀ ಸಿ.ವಿ.ಎಸ್. ಚಂದ್ರಶೇಖರ್ (50), ಜೆಪ್ಪು–ಮಂಗಳೂರು ಅವರು 23-12-2025ರಂದು ನೀಡಿದ ದೂರಿನ ಆಧಾರದಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 121/2025ರಂತೆ ಪ್ರಕರಣ ದಾಖಲಾಗಿದ್ದು, BNS–2023ರ ಕಲಂ 314, 316(5), 318(2) ಅಡಿಯಲ್ಲಿ ತನಿಖೆ ಮುಂದುವರಿದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದ್ದು, ಬ್ಯಾಂಕ್ ಹಾಗೂ ಪೊಲೀಸ್ ಇಲಾಖೆ ಎರಡೂ ಮಟ್ಟದಲ್ಲಿ ತನಿಖೆ ಚುರುಕುಗೊಂಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು