ಕಾರವಾರ: "ಹಾವು ಕಚ್ಚಿದರೆ 108 ಅಂಬುಲೆನ್ಸ್ ಸಿಬ್ಬಂದಿ ಮನೆಗೆ ಬಂದು ಆಂಟಿ ಸ್ನೇಕ್ ವೆನಮ್ (ASV) ಇಂಜೆಕ್ಷನ್ ನೀಡುತ್ತಾರೆ" ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಆದರೆ ಈ ಮಾಹಿತಿ ಸಂಪೂರ್ಣ ಸುಳ್ಳು ಎಂದು ಆರೋಗ್ಯ ಇಲಾಖೆ ಹಾಗೂ ವೈದ್ಯರು ಸ್ಪಷ್ಟಪಡಿಸಿದ್ದಾರೆ.
ವಿಷಕಾರಿ ಹಾವು ಕಚ್ಚಿದ ಸಂದರ್ಭದಲ್ಲಿ ಬಳಸುವ ಆಂಟಿ ಸ್ನೇಕ್ ವೆನಮ್ (ASV) ಜೀವ ಉಳಿಸುವ ಅತ್ಯಂತ ಮಹತ್ವದ ಔಷಧಿ. ಆದರೆ ಇದನ್ನು ವೈದ್ಯರ ನೇರ ಮೇಲ್ವಿಚಾರಣೆಯಲ್ಲಿರುವ ಆಸ್ಪತ್ರೆಯಲ್ಲಿಯೇ ನೀಡಬೇಕು. ಕೆಲವರಿಗೆ ಈ ಔಷಧಿಯಿಂದ ತೀವ್ರ ಅಲರ್ಜಿ ಅಥವಾ ಇತರ ಗಂಭೀರ ಅಡ್ಡಪರಿಣಾಮಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ, ವೆಂಟಿಲೇಟರ್, ಆಮ್ಲಜನಕ ಸೇರಿದಂತೆ ತುರ್ತು ಚಿಕಿತ್ಸಾ ಸೌಲಭ್ಯಗಳಿರುವ ಆಸ್ಪತ್ರೆಯಲ್ಲಿ ಮಾತ್ರ ಚಿಕಿತ್ಸೆ ನೀಡಲಾಗುತ್ತದೆ.
ಹಾವು ಕಚ್ಚಿದ ಕೂಡಲೇ 108 ತುರ್ತು ಸೇವೆಗೆ ಕರೆ ಮಾಡುವುದು ಅಥವಾ ಸಮೀಪದ ಆಸ್ಪತ್ರೆಗೆ ತಕ್ಷಣ ತೆರಳುವುದು ಜೀವ ಉಳಿಸುವ ಅತ್ಯುತ್ತಮ ಕ್ರಮವಾಗಿದೆ. 108 ಸಿಬ್ಬಂದಿ ರೋಗಿಗೆ ಅಗತ್ಯ ಪ್ರಾಥಮಿಕ ಚಿಕಿತ್ಸೆ ನೀಡಿ, ಸುರಕ್ಷಿತವಾಗಿ ಆಸ್ಪತ್ರೆಗೆ ತಲುಪಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ. ಆದರೆ ಮನೆಗೆ ಬಂದು ASV ಇಂಜೆಕ್ಷನ್ ನೀಡುತ್ತಾರೆ ಎಂಬ ಮಾಹಿತಿ ಸತ್ಯಕ್ಕೆ ದೂರವಾಗಿದೆ.
ಆರೋಗ್ಯ ಇಲಾಖೆಯು ಸಾರ್ವಜನಿಕರಿಗೆ ಮನವಿ ಮಾಡಿದ್ದು, ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಅಧಿಕೃತ ಮೂಲಗಳಿಂದ ಮಾತ್ರ ಪರಿಶೀಲಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಪರಿಶೀಲಿಸದ ಸಂದೇಶಗಳನ್ನು ಹಂಚಿಕೊಳ್ಳುವುದನ್ನು ತಪ್ಪಿಸಿ, ತುರ್ತು ಸಂದರ್ಭಗಳಲ್ಲಿ ವೈದ್ಯರು ಹಾಗೂ ಆರೋಗ್ಯ ಇಲಾಖೆಯ ಸೂಚನೆಗಳನ್ನು ಮಾತ್ರ ಅನುಸರಿಸಬೇಕು ಎಂದು ತಿಳಿಸಿದೆ.
0 ಕಾಮೆಂಟ್‌ಗಳು
Don't use abusive language. If any one found to be using abusive language straight away it will be reported to cyber police.
ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.