Ticker

6/recent/ticker-posts
Responsive Advertisement

Uttarakannda: ಶಿರಸಿ ಬಸ್ ನಿಲ್ದಾಣದಲ್ಲಿ ಸರಣಿ ಕಳ್ಳತನ: ಅಂತರ ಜಿಲ್ಲಾ ಮಹಿಳೆ ಬಂಧನ, ₹9 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಶಿರಸಿ: ಬಸ್ ನಿಲ್ದಾಣದ ಜನಸಂದಣಿಯನ್ನು ದುರುಪಯೋಗಪಡಿಸಿಕೊಂಡು ಪ್ರಯಾಣಿಕರ ಬ್ಯಾಗ್‌ಗಳಿಂದ ಚಿನ್ನಾಭರಣ ಕಳವು ಮಾಡುತ್ತಿದ್ದ ಮಹಿಳೆಯನ್ನು ಶಿರಸಿ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತೆಯಿಂದ ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಮಾರು ₹9 ಲಕ್ಷ ಮೌಲ್ಯದ 70 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತೆಯನ್ನು ಬೆಂಗಳೂರಿನ ರಾಜಾಜಿನಗರ ನಿವಾಸಿ ಜ್ಯೋತಿ ಅಲಿಯಾಸ್ ಸಂಜನಾ (32) ಎಂದು ಗುರುತಿಸಲಾಗಿದೆ. ಜೂನ್ 3ರಂದು ಶಿರಸಿ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದ ಕಳ್ಳತನ ಪ್ರಕರಣದ ತನಿಖೆಯ ವೇಳೆ ಸಿಸಿಟಿವಿ ದೃಶ್ಯಗಳು, ತಾಂತ್ರಿಕ ಮಾಹಿತಿ ಹಾಗೂ ಇತರೆ ಸಾಕ್ಷ್ಯಗಳ ಆಧಾರದ ಮೇಲೆ ಜೂನ್ 25ರಂದು ಆಕೆಯನ್ನು ಬಂಧಿಸಲಾಗಿದೆ.

ತನಿಖೆಯ ಪ್ರಕಾರ, ಸೊರಬ ತಾಲೂಕಿನ ಕಲಗೋಡ ಗ್ರಾಮದ ಮಹಿಳೆಯೊಬ್ಬರು ತಮ್ಮ ಸಂಬಂಧಿಕರನ್ನು ಬಸ್‌ಗೆ ಹತ್ತಿಸುವ ವೇಳೆ ಉಂಟಾದ ಜನಸಂದಣಿಯ ಲಾಭ ಪಡೆದ ಆರೋಪಿತೆ, ವ್ಯಾನಿಟಿ ಬ್ಯಾಗ್‌ನ ಜಿಪ್ ತೆರೆಯುವ ಮೂಲಕ 30 ಗ್ರಾಂ ಚಿನ್ನಾಭರಣ, ಮೊಬೈಲ್ ಫೋನ್ ಹಾಗೂ ₹8 ಸಾವಿರ ನಗದು ಸೇರಿದಂತೆ ಒಟ್ಟು ₹1.59 ಲಕ್ಷ ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದಳು.

ವಿಚಾರಣೆ ವೇಳೆ, 2025ರ ಸೆಪ್ಟೆಂಬರ್ 24ರಂದು ಇದೇ ಬಸ್ ನಿಲ್ದಾಣದಲ್ಲಿ ನಡೆದ ಮತ್ತೊಂದು ಕಳ್ಳತನ ಪ್ರಕರಣದಲ್ಲೂ ತನ್ನ ಪಾತ್ರವಿರುವುದನ್ನು ಆರೋಪಿತೆ ಒಪ್ಪಿಕೊಂಡಿದ್ದಾಳೆ. ಇದರ ಆಧಾರದ ಮೇಲೆ ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 70 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಜಿಲ್ಲಾ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸಿದ ವಿಶೇಷ ತನಿಖಾ ತಂಡವು ಸಿಸಿಟಿವಿ ಮತ್ತು ತಾಂತ್ರಿಕ ಮಾಹಿತಿಯ ನೆರವಿನಿಂದ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಪ್ರಕರಣವನ್ನು ಶೀಘ್ರವಾಗಿ ಭೇದಿಸಿ ಕಳುವಾದ ಚಿನ್ನಾಭರಣವನ್ನು ವಶಪಡಿಸಿಕೊಂಡ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಅಭಿನಂದಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು