Ticker

6/recent/ticker-posts
Responsive Advertisement

News: ಕಾರವಾರದಲ್ಲಿ 150 ಬಾಕ್ಸ್ ಅಕ್ರಮ ಮದ್ಯ ಜಪ್ತಿ; ₹17 ಲಕ್ಷ ಮೌಲ್ಯದ ಮದ್ಯ ಹಾಗೂ ವಾಹನ ವಶಕ್ಕೆ

ಕಾರವಾರದಲ್ಲಿ ಭಾರಿ ಅಕ್ರಮ ಮದ್ಯ ಸಾಗಾಟ ಪತ್ತೆ: 150 ಬಾಕ್ಸ್ ಮದ್ಯ ಜಪ್ತಿ, ಕೇರಳ ಮೂಲದ ವ್ಯಕ್ತಿ ವಶಕ್ಕೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮಾಜಾಳಿ ಚೆಕ್‌ಪೋಸ್ಟ್‌ನಲ್ಲಿ ಅಬಕಾರಿ ಇಲಾಖೆ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಪರವಾನಗಿ ಇಲ್ಲದೆ ಸಾಗಿಸಲಾಗುತ್ತಿದ್ದ ಸುಮಾರು 150 ಬಾಕ್ಸ್ (1,296 ಲೀಟರ್) ಮದ್ಯವನ್ನು ಜಪ್ತಿ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಮೂಲದ ಒಬ್ಬ ವ್ಯಕ್ತಿಯನ್ನು ಅಧಿಕಾರಿಗಳು ವಶಕ್ಕೆ ಪಡೆದು, ಮುಂದಿನ ತನಿಖೆ ಆರಂಭಿಸಿದ್ದಾರೆ.

ಅಬಕಾರಿ ಇಲಾಖೆಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ರಸ್ತೆ ತಪಾಸಣೆ ನಡೆಸಿದ ಅಧಿಕಾರಿಗಳು ಅಶೋಕ್ ಲೇಲ್ಯಾಂಡ್ ಸರಕು ವಾಹನವನ್ನು ಪರಿಶೀಲಿಸಿದರು. ಪರಿಶೀಲನೆಯ ವೇಳೆ ವಿವಿಧ ಬ್ರಾಂಡ್‌ಗಳ ಮದ್ಯವನ್ನು ಅಗತ್ಯ ದಾಖಲೆಗಳಿಲ್ಲದೆ ಮಂಗಳೂರು ಕಡೆಗೆ ಸಾಗಿಸಲಾಗುತ್ತಿರುವುದು ಪತ್ತೆಯಾಯಿತು.

ಪ್ರಕರಣದಲ್ಲಿ ಕೇರಳದ ಕಾಸರಗೋಡು ಜಿಲ್ಲೆಯ ಪೆರಿಯಾ ಗ್ರಾಮದ ಮನ್ಸೂರ್ ಮುಹಮ್ಮದ್ (32) ಅವರನ್ನು ವಶಕ್ಕೆ ಪಡೆಯಲಾಗಿದೆ. ಜಪ್ತಿ ಮಾಡಲಾದ ಮದ್ಯದ ಅಂದಾಜು ಮೌಲ್ಯ ಸುಮಾರು ₹9 ಲಕ್ಷ ಆಗಿದ್ದು, ವಾಹನದ ಮೌಲ್ಯ ಸುಮಾರು ₹8 ಲಕ್ಷ ಎಂದು ಅಂದಾಜಿಸಲಾಗಿದೆ. ಒಟ್ಟಾರೆ ₹17 ಲಕ್ಷ ಮೌಲ್ಯದ ಮದ್ಯ ಹಾಗೂ ವಾಹನವನ್ನು ಅಬಕಾರಿ ಇಲಾಖೆ ವಶಪಡಿಸಿಕೊಂಡಿದೆ.

ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರ ನಿರ್ದೇಶನದಂತೆ ಹಾಗೂ ಉತ್ತರ ಕನ್ನಡ ಜಿಲ್ಲಾ ಅಬಕಾರಿ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಅಬಕಾರಿ ಕಾಯ್ದೆ–1965ರ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಮತ್ತು ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಅಬಕಾರಿ ಇಲಾಖೆ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು