Ticker

6/recent/ticker-posts
Responsive Advertisement

Uttarakannda: ಕಾರವಾರದಲ್ಲಿ ಮಿಸ್ ಇಂಡಿಯಾ ಸಾಧ್ವಿ ಸೈಲ್‌ಗೆ ಭರ್ಜರಿ ಸ್ವಾಗತ

ಕಾರವಾರ: ಫೆಮಿನಾ ಮಿಸ್ ಇಂಡಿಯಾ 2026 ಕಿರೀಟ ಗೆದ್ದ ಸಾಧ್ವಿ ಸೈಲ್ ಅವರು ಇಂದು ಕಾರವಾರಕ್ಕೆ ಆಗಮಿಸಿ ಜನರಿಂದ ಅದ್ದೂರಿ ಸ್ವಾಗತವನ್ನು ಪಡೆದರು. ಗೋವಾದಿಂದ ಹೆಲಿಕಾಪ್ಟರ್ ಮೂಲಕ ಕಾರವಾರದ ಮಾಲಾದೇವಿ ಮೈದಾನಕ್ಕೆ ಬಂದ ಅವರನ್ನು ನೂರಾರು ಅಭಿಮಾನಿಗಳು ಪುಷ್ಪ ಮಳೆಯೊಂದಿಗೆ ಬರಮಾಡಿಕೊಂಡರು.

ನಗರದಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದ ಸಾಧ್ವಿ ಸೈಲ್ ಅವರು ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಜನರಿಗೆ ಕೈ ಬೀಸಿ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅನೇಕರು ಅವರೊಂದಿಗೆ ಸೆಲ್ಫಿ ತೆಗೆದು ಸಂತಸ ವ್ಯಕ್ತಪಡಿಸಿದರು.

ನಂತರ ಅವರು ಕಾರವಾರದ ಸುಭಾಷ್ ವೃತ್ತದಲ್ಲಿರುವ ಸಿದ್ದಿವಿನಾಯಕ ದೇವಸ್ಥಾನಕ್ಕೆ ತೆರಳಿ ಮಿಸ್ ಇಂಡಿಯಾ ಕಿರೀಟವನ್ನು ಗಣಪತಿ ದೇವರ ಮುಂದೆ ಇಟ್ಟು ವಿಶೇಷ ಪೂಜೆ ಸಲ್ಲಿಸಿದರು.

ಗೋವಾ ರಾಜ್ಯವನ್ನು ಪ್ರತಿನಿಧಿಸಿ ಮಿಸ್ ಇಂಡಿಯಾ ಪಟ್ಟವನ್ನು ಗೆದ್ದ ಸಾಧ್ವಿ ಸೈಲ್ ಅವರು, ಕಾರವಾರ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರ ಪುತ್ರಿ. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಕಾರವಾರ ಮತ್ತು ಗೋವಾದ ಜನರು ನನ್ನ ಮೇಲೆ ತೋರಿದ ಪ್ರೀತಿ ಅಪ್ರತಿಮ. ಎಲ್ಲರೂ ಒಂದೇ ಕುಟುಂಬದವರಂತೆ ಬೆಂಬಲ ನೀಡಿದ್ದಾರೆ. ಮುಂದೆಯೂ ನಿಮ್ಮ ಆಶೀರ್ವಾದ ನನಗೆ ಸಿಗಲಿ” ಎಂದು ಹೇಳಿದರು.

ಇದರೊಂದಿಗೆ ಸಂತೋಷ ವ್ಯಕ್ತಪಡಿಸಿದ ಶಾಸಕ ಸತೀಶ್ ಸೈಲ್ ಅವರು, “ಅಕ್ಷಯ ತೃತೀಯದ ದಿನ ನನ್ನ ಮಗಳು ನೀಡಿದ ಅತ್ಯುತ್ತಮ ಉಡುಗೊರೆ ಇದು. ಅವಳು ಮಿಸ್ ಇಂಡಿಯಾ ಆಗಿದ್ದಾಳೆ ಎಂಬುದನ್ನು ಮೊದಲಿಗೆ ನಂಬಲು ಕಷ್ಟವಾಯಿತು. ಅವಳ ಪರಿಶ್ರಮ ಮತ್ತು ಜನರ ಆಶೀರ್ವಾದದಿಂದ ಈ ಸಾಧನೆ ಸಾಧ್ಯವಾಗಿದೆ. ಮುಂದಿನ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲೂ ಅವಳು ಯಶಸ್ಸು ಸಾಧಿಸಲಿ” ಎಂದು ಆಶಿಸಿದರು.

ಭುವನೇಶ್ವರದ ಕಳಿಂಗ ಇನ್‌ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ (ಕೆಐಐಟಿ) ಕ್ಯಾಂಪಸ್‌ನಲ್ಲಿ ನಡೆದ ಫೆಮಿನಾ ಮಿಸ್ ಇಂಡಿಯಾ 2026 ಸ್ಪರ್ಧೆಯಲ್ಲಿ ಸಾಧ್ವಿ ಸೈಲ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಅವರು 2027ರ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಈ ಸಾಧನೆ ಕಾರವಾರ ಮತ್ತು ಗೋವಾ ಜನತೆಗೆ ಹೆಮ್ಮೆಯ ವಿಷಯವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು