Ticker

6/recent/ticker-posts
Responsive Advertisement

Dakshinakannda: ನೇತ್ರಾವತಿ ನದಿ ತೀರದಲ್ಲಿ ಆಧಾರ್ ಕಾರ್ಡ್‌ಗಳ ರಾಶಿ ಪತ್ತೆ: ತನಿಖೆಗೆ ಸ್ಪೀಕರ್ ಯು.ಟಿ. ಖಾದರ್ ಸೂಚನೆ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಫರಂಗಿಪೇಟೆ ಸಮೀಪದ ನೇತ್ರಾವತಿ ನದಿ ತೀರದಲ್ಲಿ ಅಪಾರ ಪ್ರಮಾಣದ ಆಧಾರ್ ಕಾರ್ಡ್‌ಗಳು ಪತ್ತೆಯಾಗಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಮಂಗಳೂರು ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಪುದು ಗ್ರಾಮದ ಬಳಿ ನದಿ ತಟದಲ್ಲಿ ಕಾರ್ಡ್‌ಗಳು ಬಿದ್ದಿರುವುದನ್ನು ಕೆಲ ಸ್ಥಳೀಯರು ಗಮನಿಸಿ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ಸಾರ್ವಜನಿಕರು ನೀಡಿದ ಮಾಹಿತಿಯ ಮೇರೆಗೆ ಪುದು ಗ್ರಾಮ ಪಂಚಾಯತ್ ಅಧ್ಯಕ್ಷರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಸ್ಥಳೀಯರ ಸಹಕಾರದಿಂದ ನದಿ ತೀರದಲ್ಲಿ ಕಂಡುಬಂದ ಆಧಾರ್ ಕಾರ್ಡ್‌ಗಳನ್ನು ಸಂಗ್ರಹಿಸಲಾಯಿತು. ಈ ವಿಚಾರವನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಶಾಸಕರಿಗೂ ತಿಳಿಸಲಾಗಿದೆ.

ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ವಿಧಾನಸಭಾಧ್ಯಕ್ಷ ಹಾಗೂ ಮಂಗಳೂರು ಕ್ಷೇತ್ರದ ಶಾಸಕ ಯು.ಟಿ. ಖಾದರ್ ಅವರು ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಅಪಾರ ಪ್ರಮಾಣದಲ್ಲಿ ಆಧಾರ್ ಕಾರ್ಡ್‌ಗಳು ನದಿ ತೀರದಲ್ಲಿ ಪತ್ತೆಯಾಗಿರುವ ಹಿನ್ನೆಲೆ ಇದರ ಮೂಲ ಕಾರಣವನ್ನು ಪತ್ತೆಹಚ್ಚುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಸಂಬಂಧ ಯುಐಡಿಎಐ (UIDAI) ಯೋಜನಾ ವ್ಯವಸ್ಥಾಪಕರಿಗೆ ಪತ್ರ ಬರೆದು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಇದೇ ವೇಳೆ ಅಂಚೆ ಇಲಾಖೆಯ ಅಧಿಕಾರಿಗಳು ಕೂಡ ಘಟನೆ ಬಗ್ಗೆ ಗಮನ ಹರಿಸಿದ್ದಾರೆ. ಮಂಗಳೂರು ಅಂಚೆ ವಿಭಾಗದ ಉಪಾಧೀಕ್ಷಕರು ಮಾತನಾಡಿ, ನದಿ ತೀರದಲ್ಲಿ ಆಧಾರ್ ಕಾರ್ಡ್‌ಗಳು ಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಅಂಚೆ ಇಲಾಖೆಯ ನಿರೀಕ್ಷಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದು, ವರದಿ ಸಲ್ಲಿಸಿದ ಬಳಿಕ ಮುಂದಿನ ಕ್ರಮದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಸಂಪೂರ್ಣ ಸತ್ಯಾಸತ್ಯತೆ ತಿಳಿಯಲು ಅಧಿಕಾರಿಗಳ ತನಿಖೆಯ ನಂತರವೇ ಸ್ಪಷ್ಟತೆ ದೊರೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು