ಜಿಲ್ಲೆಯ ಜನಪ್ರಿಯ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ ಹಾಗೂ ಸೀತಾಳಯ್ಯನಗಿರಿ ಪ್ರದೇಶಗಳಲ್ಲಿ ಪ್ರವಾಸೋದ್ಯಮ ಇಲಾಖೆಯ ಗುತ್ತಿಗೆ ನೌಕರರಾಗಿರುವ ಗಂಗಾಧರ್, ಹರೀಶ್, ರಾಜು, ರಮೇಶ್ ಮತ್ತು ಯೋಗೇಶ್ ಅವರು ವಿಶಿಷ್ಟ ಸೇವಾ ಕಾರ್ಯಕ್ಕೆ ಕೈಹಾಕಿದ್ದಾರೆ. ತಮ್ಮ ಸ್ವಂತ ಖರ್ಚಿನಲ್ಲಿ ಮಡಿಕೆಗಳನ್ನು ಖರೀದಿಸಿ, ಗಿರಿಶ್ರೇಣಿಯ ವಿವಿಧ ಭಾಗಗಳಲ್ಲಿ ಸುಮಾರು 70ಕ್ಕೂ ಹೆಚ್ಚು ಮರಗಳಿಗೆ ಮಡಿಕೆಗಳನ್ನು ಕಟ್ಟಿ ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಿದ್ದಾರೆ.
ಬೇಸಿಗೆಯ ಕಾರಣದಿಂದ ಅನೇಕ ಕಡೆಗಳಲ್ಲಿ ಸಹಜ ನೀರಿನ ಮೂಲಗಳು ಒಣಗುತ್ತಿರುವುದನ್ನು ಗಮನಿಸಿದ ಅವರು, ಪಕ್ಷಿಗಳಿಗೆ ನೀರು ಲಭ್ಯವಾಗುವಂತೆ ಈ ಪ್ರಯತ್ನ ಆರಂಭಿಸಿದ್ದಾರೆ. ಮರಗಳ ಕೊಂಬೆಗಳಿಗೆ ಮಡಿಕೆಗಳನ್ನು ಭದ್ರವಾಗಿ ಕಟ್ಟಿ, ಅವುಗಳಲ್ಲಿ ನಿಯಮಿತವಾಗಿ ನೀರು ತುಂಬುವ ವ್ಯವಸ್ಥೆಯನ್ನು ಮಾಡಲಾಗಿದೆ.
ಇದು ಒಂದೇ ದಿನದ ಕಾರ್ಯವಲ್ಲ. ಪ್ರತಿ ಎರಡು ದಿನಕ್ಕೊಮ್ಮೆ ಮಡಿಕೆಗಳಿಗೆ ನೀರು ತುಂಬಿಸುವ ಜವಾಬ್ದಾರಿಯನ್ನೂ ಅವರು ಸ್ವತಃ ಹೊತ್ತಿದ್ದಾರೆ. ತಮ್ಮ ನಿಯಮಿತ ಕರ್ತವ್ಯಗಳ ನಡುವೆಯೂ ಈ ಸೇವೆಯನ್ನು ನಿರಂತರವಾಗಿ ಮುಂದುವರಿಸುತ್ತಿರುವುದು ಗಮನಾರ್ಹವಾಗಿದೆ.
ಈ ಶ್ಲಾಘನೀಯ ಕಾರ್ಯಕ್ಕೆ ಸ್ಥಳೀಯ ಜೀಪ್ ಚಾಲಕರು ಕೂಡ ಕೈಜೋಡಿಸಿದ್ದು, ನೀರು ಸಾಗಿಸಲು ಹಾಗೂ ಅಗತ್ಯ ಸಹಾಯ ನೀಡುವ ಮೂಲಕ ಸಹಕರಿಸುತ್ತಿದ್ದಾರೆ. ಪ್ರವಾಸಿಗರ ಸುರಕ್ಷತೆಯೊಂದಿಗೆ ಪರಿಸರ ಸಂರಕ್ಷಣೆ ಹಾಗೂ ಜೀವರಾಶಿಗಳ ಬಗ್ಗೆ ಕಾಳಜಿ ವಹಿಸುವ ಸಂದೇಶವನ್ನು ಈ ಕಾರ್ಯ ಸಾರುತ್ತಿದೆ.
ಇತ್ತೀಚಿನ ದಿನಗಳಲ್ಲಿ ಗುಡ್ಡಗಾಡು ಪ್ರದೇಶದ ದೇವಾಲಯಗಳಿಗೆ ಭೇಟಿ ನೀಡುವಾಗ ಕೆಲವರು ಕಲ್ಲುಗಳನ್ನು ಜೋಡಿಸಿ ಮನೆ ಕಟ್ಟುವ ಸಂಪ್ರದಾಯವನ್ನು ಪಾಲಿಸುತ್ತಾರೆ. ಅದೇ ರೀತಿ, ಚಿಕ್ಕಮಗಳೂರು ಗಿರಿಶ್ರೇಣಿಗೆ ಭೇಟಿ ನೀಡುವ ಪ್ರವಾಸಿಗರು ಗಿಡ–ಮರಗಳಿಗೆ ಮಡಿಕೆ ಕಟ್ಟಿ ಅದರಲ್ಲಿ ನೀರು ತುಂಬುವಂತಹ ಸಣ್ಣ ಕಾರ್ಯಗಳನ್ನು ಮಾಡಿದರೆ ಅದು ಜೀವಜಗತ್ತಿಗೆ ನೆರವಾಗುವುದರ ಜೊತೆಗೆ ಒಳ್ಳೆಯ ಸಂದೇಶವನ್ನೂ ನೀಡುತ್ತದೆ ಎಂಬ ಅಭಿಪ್ರಾಯವನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ.
0 ಕಾಮೆಂಟ್‌ಗಳು
Don't use abusive language. If any one found to be using abusive language straight away it will be reported to cyber police.
ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.