Ticker

6/recent/ticker-posts
Responsive Advertisement

Uttarakannda: ಅಂಕೋಲಾ ಸಮೀಪ ಹೆದ್ದಾರಿ ಅಪಘಾತ: : ಲಾರಿ-ಬಸ್ ಡಿಕ್ಕಿ, 28 ಮಂದಿಗೆ ಗಾಯ: ಗಾಯಾಳು ಆಸ್ಪತ್ರೆಗೆ ದಾಖಲು

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಸುಂಕಸಾಲೆ ಸಮೀಪ ರಾಷ್ಟ್ರೀಯ ಹೆದ್ದಾರಿ-52ರಲ್ಲಿ ಗುರುವಾರ ಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಲಾರಿ ಮತ್ತು ಎರಡು ಖಾಸಗಿ ಬಸ್‌ಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 28 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಇವರಲ್ಲಿ 12 ಮಂದಿ ವಿದೇಶಿ ಪ್ರವಾಸಿಗರು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಗೊಂಡ ವಿದೇಶಿ ಪ್ರವಾಸಿಗರಲ್ಲಿ ಎಂಟು ಮಂದಿಯ ಸ್ಥಿತಿ ಗಂಭೀರವಾಗಿದೆ. ಅಪಘಾತದಲ್ಲಿ ಗಾಯಗೊಂಡ ಎಲ್ಲರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪೊಲೀಸರ ಪ್ರಕಾರ, ಅಂಕೋಲಾ ಮಾರ್ಗವಾಗಿ ಹುಬ್ಬಳ್ಳಿಯತ್ತ ಸಾಗುತ್ತಿದ್ದ ಲಾರಿ, ಹಂಪಿಯಿಂದ ಗೋವಾಗೆ ತೆರಳುತ್ತಿದ್ದ ಖಾಸಗಿ ಬಸ್‌ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಈ ವೇಳೆ ಹಿಂಬದಿಯಿಂದ ಬರುತ್ತಿದ್ದ ಮತ್ತೊಂದು ಖಾಸಗಿ ಬಸ್ ನಿಯಂತ್ರಣ ತಪ್ಪಿ ಅಪಘಾತಗೊಂಡ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಮೂರು ವಾಹನಗಳಿಗೂ ಭಾರೀ ಹಾನಿಯಾಗಿದೆ.

ಅಪಘಾತದ ಬಳಿಕ ಎರಡು ಬಸ್‌ ಚಾಲಕರು ಕಾಲುಗಳಿಗೆ ಗಂಭೀರ ಗಾಯಗೊಂಡು ಕ್ಯಾಬಿನ್ ಒಳಗೆ ಸಿಲುಕಿಕೊಂಡಿದ್ದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸಿ ಗಾಯಾಳುಗಳನ್ನು ಹೊರತೆಗೆದರು.

ಮೊದಲು ಎಲ್ಲ ಗಾಯಾಳುಗಳನ್ನು ಅಂಕೋಲಾ ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಗಂಭೀರ ಗಾಯಗೊಂಡವರನ್ನು ಬಳಿಕ ಖಾಸಗಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ.

ಅಪಘಾತದ ಪರಿಣಾಮ ಕೆಲಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಬಳಿಕ ಸುಂಕಸಾಲೆ ಔಟ್‌ಪೋಸ್ಟ್‌ ಸಿಬ್ಬಂದಿ ಮತ್ತು ಅಂಕೋಲಾ ಪೊಲೀಸರು ಹಾನಿಗೊಳಗಾದ ವಾಹನಗಳನ್ನು ತೆರವುಗೊಳಿಸಿ ಸಂಚಾರವನ್ನು ಪುನಃ ಆರಂಭಿಸಿದರು.

ಈ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು