ಶಿವಮೊಗ್ಗ ಜಿಲ್ಲೆ ಭದ್ರಾವತಿ ನಗರದಲ್ಲಿ ಅಭಿಮಾನಿಗಳಿಂದ ನಿರ್ಮಿಸಲಾದ ವರನಟ ಡಾ. ರಾಜ್‌ಕುಮಾರ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ದೇವಾಲಯ ಮತ್ತು ಸುಮಾರು ಮೂರು ಅಡಿ ಎತ್ತರದ ಕಂಚಿನ ಪುತ್ಥಳಿಯನ್ನು ಗುರುವಾರ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಅನಾವರಣಗೊಳಿಸಿದರು.
ಭದ್ರಾವತಿಯ ಚಾಮೇಗೌಡ ಏರಿಯಾದ ಡಾ. ರಾಜ್‌ಕುಮಾರ್–ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಈ ದೇವಾಲಯ ಹಾಗೂ ಪುತ್ಥಳಿಯನ್ನು ನಿರ್ಮಿಸಲಾಗಿದೆ. ಅಭಿಮಾನಿಗಳೇ ಸ್ವಯಂ ಹಣ ಸಂಗ್ರಹಿಸಿ ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ದೇವಾಲಯ ನಿರ್ಮಿಸಿ, ಇಬ್ಬರು ನಟರ ಕಂಚಿನ ಪುತ್ಥಳಿಯನ್ನು ಪ್ರತಿಷ್ಠಾಪಿಸಿದ್ದಾರೆ.
ಡಾ. ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಅವರು ತಮ್ಮ ಅಭಿನಯ, ವ್ಯಕ್ತಿತ್ವ ಮತ್ತು ಸಾಮಾಜಿಕ ಮೌಲ್ಯಗಳ ಮೂಲಕ ಕೋಟ್ಯಂತರ ಜನರ ಹೃದಯಗಳಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ತಂದೆ–ಮಗ ಇಬ್ಬರೂ ಹಲವು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿ ಕನ್ನಡ ಚಿತ್ರರಂಗಕ್ಕೆ ಅಪೂರ್ವ ಕೊಡುಗೆ ನೀಡಿದ್ದಾರೆ. ಇಂತಹ ಮಹಾನ್ ಕಲಾವಿದರಿಗೆ ಗೌರವ ಸಲ್ಲಿಸುವ ಉದ್ದೇಶದಿಂದಲೇ ಅಭಿಮಾನಿಗಳು ದೇವಾಲಯ ನಿರ್ಮಿಸಿರುವುದು ವಿಶೇಷ.
ದೇವಾಲಯ ಹಾಗೂ ಪುತ್ಥಳಿ ಅನಾವರಣದ ಸಂದರ್ಭದಲ್ಲಿ ಮಾತನಾಡಿದ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಕ್ಷಣಕಾಲ ಭಾವುಕರಾಗಿ, “ನಮ್ಮ ಕುಟುಂಬದ ಮೇಲೆ ಅಭಿಮಾನಿಗಳು ತೋರಿಸಿರುವ ಪ್ರೀತಿ ಹಾಗೂ ವಿಶ್ವಾಸಕ್ಕೆ ನಾನು ಚಿರಋಣಿ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್, “ಡಾ. ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಇಬ್ಬರೂ ಕನ್ನಡ ಚಿತ್ರರಂಗದ ಶ್ರೇಷ್ಠ ಕಲಾವಿದರು. ಡಾ. ರಾಜ್‌ಕುಮಾರ್ ಅವರು ವಯಸ್ಸಿನ ಮಿತಿಯನ್ನು ಮೀರಿ ಅದ್ಭುತ ಅಭಿನಯ ನೀಡಿದವರು. ಅವರ ಸೇವೆ, ಕೊಡುಗೆ ಮತ್ತು ಕಲೆಯ ಮಟ್ಟ ಇಂದಿಗೂ ಅಪರೂಪ. ಹೇಗೆ ಇತರ ದೇವಾಲಯಗಳಲ್ಲಿ ಪೂಜೆ ನಡೆಯುತ್ತದೆಯೋ, ಹಾಗೆಯೇ ಇಲ್ಲಿ ಕೂಡ ನಿತ್ಯ ಪೂಜೆ ನಡೆಯಲಿದೆ. ಅಶ್ವಿನಿ ಅಮ್ಮನವರು ಭದ್ರಾವತಿಗೆ ಬಂದಿರುವುದು ನಮ್ಮ ಭಾಗ್ಯ. ಸೂರ್ಯ–ಚಂದ್ರರು ಇರುವವರೆಗೂ ಈ ದೇವಾಲಯದಲ್ಲಿ ಪೂಜೆ ಮುಂದುವರಿಯಲಿದೆ” ಎಂದು ಹೇಳಿದರು.
ಈ ಕಾರ್ಯಕ್ರಮಕ್ಕೆ ಸ್ಥಳೀಯ ನಾಯಕರು, ಅಭಿಮಾನಿಗಳು ಹಾಗೂ ಗಣ್ಯರು ಸಾಕ್ಷಿಯಾಗಿದ್ದು, ಭದ್ರಾವತಿಯಲ್ಲಿ ಡಾ. ರಾಜ್‌ಕುಮಾರ್–ಪುನೀತ್ ರಾಜ್‌ಕುಮಾರ್ ಅವರ ಸ್ಮರಣೆ ಮತ್ತಷ್ಟು ಗಟ್ಟಿಯಾಗಿ ಉಳಿಯುವಂತಾಗಿದೆ.
0 ಕಾಮೆಂಟ್‌ಗಳು
Don't use abusive language. If any one found to be using abusive language straight away it will be reported to cyber police.
ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.