Ticker

6/recent/ticker-posts
Responsive Advertisement

ಉತ್ತರ ಕನ್ನಡ: ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಕ್ರಮ ಪ್ಯಾರಾಗೋಲಾ ನಿರ್ಮಾಣ ಆರೋಪ; ತನಿಖೆಗೆ ಆದೇಶ

ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅರಣ್ಯ ಸಂರಕ್ಷಣೆಯೇ ಹೊಣೆಗಾರಿಕೆ ಹೊಂದಿರುವ ಅಧಿಕಾರಿಗಳ ವಿರುದ್ಧವೇ ಗಂಭೀರ ಆರೋಪ ಕೇಳಿಬಂದಿದೆ. ಸಂರಕ್ಷಿತ ಅರಣ್ಯ ವಲಯದೊಳಗೆ ಮೋಜು-ಮಸ್ತಿಗಾಗಿ ಅಕ್ರಮವಾಗಿ ಮರಗಳನ್ನು ಕಡಿದು ಪ್ಯಾರಾಗೋಲಾ ನಿರ್ಮಿಸಲಾಗಿದೆ ಎಂಬ ಆರೋಪದಿಂದ ಪರಿಸರ ವಲಯದಲ್ಲಿ ತೀವ್ರ ಚರ್ಚೆ ಶುರುವಾಗಿದೆ.

ಜೋಯಿಡಾ ತಾಲೂಕಿನ ಗುಂದ ಅರಣ್ಯ ವಲಯದ ವ್ಯಾಪ್ತಿಯಲ್ಲಿ ಈ ನಿರ್ಮಾಣ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ದಟ್ಟ ಅರಣ್ಯದ ಮಧ್ಯೆ ಎರಡು ರಿಂದ ಮೂರು ಮರಗಳನ್ನು ಕಡಿದು, ಸಮೀಪದ ದೊಡ್ಡ ಮರಗಳ ಕೊಂಬೆಗಳಿಗೆ ಕೊಡಲಿ ಪೆಟ್ಟು ನೀಡಲಾಗಿದೆ ಎನ್ನಲಾಗುತ್ತಿದೆ. ಅರಣ್ಯ ಸಂಪತ್ತನ್ನು ರಕ್ಷಿಸಬೇಕಾದವರೇ ಅದಕ್ಕೆ ಹಾನಿ ಮಾಡುತ್ತಿದ್ದಾರೆ ಎಂಬ ಆರೋಪಗಳು ಸಾಮಾಜಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿವೆ.

ಹುಲಿ ಸಂರಕ್ಷಿತ ಪ್ರದೇಶಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆ–1972ರ ಅಡಿಯಲ್ಲಿ ಅತ್ಯಂತ ಕಠಿಣ ನಿಯಮಗಳಿಗೆ ಒಳಪಟ್ಟಿವೆ. ಈ ಕಾಯ್ದೆಯ ಪ್ರಕಾರ ಸಂರಕ್ಷಿತ ಪ್ರದೇಶದಲ್ಲಿ ಒಂದು ಮರ ಕಡಿಯುವುದಕ್ಕೂ, ಅರಣ್ಯ ಸಂಪನ್ಮೂಲ ಬಳಸುವುದಕ್ಕೂ ಸ್ಪಷ್ಟ ನಿಷೇಧವಿದೆ. ಇಂತಹ ನಿಯಮಗಳು ಜಾರಿಯಲ್ಲಿರುವ ನಡುವೆಯೇ ಪ್ಯಾರಾಗೋಲಾ ನಿರ್ಮಾಣ ನಡೆದಿದೆ ಎಂಬ ಆರೋಪಗಳು ಗಂಭೀರವಾಗಿವೆ.

ಮಾಹಿತಿಯ ಪ್ರಕಾರ, ಈ ಪ್ಯಾರಾಗೋಲಾ ಚಪೇರಾ ಕಳ್ಳಬೇಟೆ ತಡೆ ಶಿಬಿರದ ಸಮೀಪ ನಿರ್ಮಾಣಗೊಂಡಿದೆ ಎನ್ನಲಾಗಿದ್ದು, ಈ ಬೆಳವಣಿಗೆ ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಪ್ರಕರಣ ಬಹಿರಂಗವಾಗುತ್ತಿದ್ದಂತೆಯೇ ಹಿರಿಯ ಅರಣ್ಯಾಧಿಕಾರಿಗಳು ತನಿಖೆಗೆ ಆದೇಶ ನೀಡಿದ್ದು, ವಾಸ್ತವಾಂಶಗಳ ಪರಿಶೀಲನೆಯ ನಂತರ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ಈ ವಿಚಾರದಲ್ಲಿ ಪರಿಸರ ಪ್ರೇಮಿಗಳು ಮತ್ತು ಸ್ಥಳೀಯ ನಾಗರಿಕರು ಪಾರದರ್ಶಕ ತನಿಖೆ ನಡೆಸಿ, ಸಂರಕ್ಷಿತ ಅರಣ್ಯ ಪ್ರದೇಶದ ಗೌರವ ಮತ್ತು ಕಾನೂನು ಕಟ್ಟುನಿಟ್ಟನ್ನು ಉಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು