ಕುಮಟಾ,ಜೂನ್ 11: ಕುಮಟಾ ತಾಲೂಕಿನ ವಕ್ಕನಳ್ಳಿ ಎಂಬಲ್ಲಿ ಮಳೆಯ ನೀರು ಹರಿದು ಹೋಗುವ ಸ್ಥಳದಲ್ಲಿ ರುಂಡವಿಲ್ಲದ ಮಹಿಳೆಯೊಬ್ಬಳ ಶವವು ತೇಲಿಬಂದಿದ್ದು ಅಲ್ಲಿನ ಜನರಲ್ಲಿ ಕೆಲಕಾಲ ಭಯವನ್ನು ಮೂಡಿಸಿತ್ತು.
ಬೆಳಿಗ್ಗೆ ಅದೇ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಗ್ರಾಮಸ್ಥರೊಬ್ಬರು ಶವವನ್ನು ನೋಡಿ ಕುಮಟದ ಪೊಲೀಸ್ ಠಾಣೆಗೆ ವಿಷಯವನ್ನು ಮುಟ್ಟಿಸಿದ್ದಾರೆ.
ಕಳೆದ ಇಪ್ಪತ್ತೇಳು ದಿನಗಳ ಹಿಂದೆಯಷ್ಟೇ ಕುಮಟಾದ ಹಳ ಕಾರ ಗ್ರಾಮದ ನಿವಾಸಿ ಕೈರುನಾ ನಿಸಾ(87) ಎಂಬುವವರು ಮನೆಯಿಂದ ನಾಪತ್ತೆಯಾಗಿದ್ದರು. ಶಂಕೆಗೊಂಡ ಪೊಲೀಸರು ಮನೆಯವರನ್ನು ಕರೆಯಿಸಿ ಶವವನ್ನು ಪರೀಕ್ಷಿಸಿದಾಗ ಅದು ನಾಪತ್ತೆಯಾದ ಕೈರುನಾ ನಿಸಾ ಎನ್ನುವವರ ಶವ ಎಂದು ತಿಳಿದುಬಂದಿದೆ.
ಘಟನೆ ನಡೆದ ಸ್ಥಳದಲ್ಲಿ ಕುಮಟಾ ಠಾಣೆಯ ಸಿಪಿಐ ಪರಮೇಶ್ವರ ಗುನಗಾ, ಪಿಎಸ್ಐ ಆನಂದಮೂರ್ತಿ ಕೈಂ ಪಿಎಸ್ಐ ಸುದಾ ಹರಿಕಂತ್ರ ಮುಂತಾದವರು ಹಾಜರಿದ್ದರು. ತದನಂತರ ಶವವನ್ನು ಕುಮಟಾದ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿಕೊಡಲಾಯಿತು.
#Kumta
#Uttara Kannada