ಉಡುಪಿ, ಮಾರ್ಚ್ 24: ಕೃಷ್ಣನಗರಿಯಾದ ಉಡುಪಿ ಜಿಲ್ಲೆಯಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು, ಅಗತ್ಯ ವಸ್ತುಗಳ ಅಂಗಡಿಗಳು ಮಾತ್ರ ತೆರೆದಿತ್ತು. ಬಸ್, ಆಟೋ ಕ್ಯಾಬ್ ಸಹಿತ ಸಂಚಾರ ಸಂಪೂರ್ಣ ಸ್ತಬ್ಧಗೊಂಡಿತ್ತು.
ನಿನ್ನೆ ಸಂಜೆಯ ದಿನ ದಿನಬಳಕೆ ವಸ್ತುಗಳ ಖರೀದಿಗಾಗಿ ಮುಗಿಬಿದ್ದ ಜನತೆ ಇವತ್ತು ಮಲ್ಪೆಯಲ್ಲೂ ಅದನ್ನೇ ಪುನರಾವರ್ತನೆ ಮಾಡಿದ್ದಾರೆ. ಉಡುಪಿಗೆ ಆರು ಕಿಮೀ ದೂರದಲ್ಲಿರುವ ಮಲ್ಪೆ ಬಂದರು ಇಂದು ಬೆಳಿಗ್ಗೆ ಜನರಿಂದ ತುಂಬಿ ಗಿಜಿಗುಡುತ್ತಿತ್ತು.
ಲಾಕ್ ಡೌನ್ ಮಧ್ಯೆಯೂ ತರಕಾರಿ ಕೊಳ್ಳಲು ಮುಗಿಬಿದ್ದ ಕೋಟೆನಾಡಿನ ಜನ
ಕಳೆದ ಹಲವುದಿನಗಳಿಂದ ಉಡುಪಿಯಲ್ಲಿ ಮೀನುಗಾರಿಕೆ ಚಟುವಟಿಕೆ ಬಹುತೇಕ ಸ್ಥಗಿತಗೊಂಡಿವೆ. ಮೀನು ಕ್ಷಾಮದ ಜೊತೆಗೆ ಮೀನಿಗೆ ದುಬಾರಿ ಬೆಲೆಯಿಂದಾಗಿ ಜನ ಮೀನು ಖರೀದಿಸುವುದನ್ನು ನಿಲ್ಲಿಸಿದ್ದರು. ಆದರೆ ಇಂದು ಬೆಳಿಗ್ಗೆ ಮಲ್ಪೆಗೆ ಬಂದ ಬೋಟುಗಳಲ್ಲಿ ಭಾರೀ ಪ್ರಮಾಣದ ಮೀನು ಇರುವುದನ್ನು ಖಾತ್ರಿಪಡಿಸಿಕೊಂಡ ಜನ ಓಡೋಡಿ ಬಂದರು. ಬೆಲೆಯೂ ಕಡಿಮೆ ಇದ್ದ ಕಾರಣ ಜನರು ಮುಗಿಬಿದ್ದು ಮೀನುಗಳನ್ನು ಖರೀದಿಸಿದ್ದಾರೆ.
ಒಂದೇ ಕಡೆ ನೂರಾರು ಜನರು ಸೇರಿದ್ದರ ಪರಿಣಾಮವಾಗಿ ಸಾಕಷ್ಟು ಜನಸಂದಣಿ ಉಂಟಾಯಿತು. ಈ ವೇಳೆ ಜನ ತಾಮುಂದು ನಾಮುಂದು ಎಂದು ಮೀನುಗಳನ್ನು ಖರೀದಿಸಿ ತಮ್ಮ ತಮ್ಮ ಮನೆಯತ್ತ ಹೊರಟರು. ಸ್ವಲ್ಪ ಸಮಯದ ಬಳಿಕ ಮಲ್ಪೆ ಬಂದರಿನಲ್ಲಿ ಜನಸಂದಣಿ ಕಡಿಮೆಯಾಗಿ ಯಥಾಸ್ಥಿತಿಗೆ ಬಂತು.
Tags:
ಉಡುಪಿ ಜಿಲ್ಲಾ ಸುದ್ದಿಗಳು