ಕಾರವಾರ, ಮಾರ್ಚ್ 24: ದುಬೈನಿಂದ ಭಟ್ಕಳಕ್ಕೆ ಬಂದು ಇಳಿದಿದ್ದ 2 ವ್ಯಕ್ತಿಗಳಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
ಇದರ ಬಗ್ಗೆ ಮಾಹಿತಿಯನ್ನು ನೀಡಿರುವ ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ "'40 ವರ್ಷದ ಭಟ್ಕಳ ಮೂಲದ ವ್ಯಕ್ತಿಯೋರ್ವ ದುಬೈನಿಂದ ವಿಮಾನದಲ್ಲಿ ಬಂದು 21ಕ್ಕೆ ಮಂಗಳೂರಿನಲ್ಲಿ ಬೆಳಿಗ್ಗೆ 6.30ಕ್ಕೆ ಬಂದು ಇಳಿದಿದ್ದರು. ಅವರ ಸಂಬಂಧಿಯೊಬ್ಬರ ಕಾರಿನಲ್ಲಿ ಭಟ್ಕಳಕ್ಕೆ ಬಂದಿದ್ದ ಅವರು, ಮಧ್ಯಾಹ್ನ ಸ್ವಯಂಪ್ರೇರಿತವಾಗಿ ಭಟ್ಕಳ ತಾಲೂಕಿನ ಆಸ್ಪತ್ರೆಗೆ ದಾಖಲಾಗಿದ್ದರು. ಅವರಲ್ಲಿ ಕೊರೊನಾ ಸೋಂಕು ಲಕ್ಷಣ ಕಂಡು ಬಂದಿದ್ದರಿಂದ ಗಂಟಲಿನ ದ್ರವವನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಸೋಮವಾರ ವರದಿ ಬಂದಿದ್ದು ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ'' ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಇನ್ನೊಬ್ಬ ಎರಡನೇ ವ್ಯಕ್ತಿ 65 ವರ್ಷದ ಭಟ್ಕಳ ಮೂಲದವರಾಗಿದ್ದು ದುಬೈನಿಂದ 19ಕ್ಕೆ ಮುಂಬೈಗೆ ಬಂದಿಳಿದಿದ್ದರು. ಅಲ್ಲಿಂದ ಮಂಗಳೂರು ಎಕ್ಸ್‌ಪ್ರೆಸ್ ಟ್ರೈನ್ ನಲ್ಲಿ ಭಟ್ಕಳಕ್ಕೆ 20ಕ್ಕೆ ಬಂದಿಳಿದಿದ್ದರು. ರೈಲು ನಿಲ್ದಾಣದಿಂದ ಆಟೊ ರಿಕ್ಷಾದಲ್ಲಿ ಮಗನ ಜೊತೆಗೆ ಮನೆಗೆ ತೆರಳಿದ್ದರು. 21ರಂದು ಆರೋಗ್ಯ ಇಲಾಖೆ ಸಿಬ್ಬಂದಿ ತಪಾಸಣೆ ಮಾಡಿದ್ದರು. ಆದರೆ, ಯಾವುದೇ ಲಕ್ಷಣ ಕಂಡು ಬಂದಿರಲಿಲ್ಲ. ಎರಡು ದಿನದ ಬಳಿಕ ಜ್ವರ ಸೇರಿದಂತೆ ಸೋಂಕಿನ ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಭಟ್ಕಳ ತಾಲೂಕಾ ಆಸ್ಪತ್ರೆಗೆ ದಾಖಲಿಸಿದ್ದರು. ಅವರ ಗಂಟಲಿನ ದ್ರವವನ್ನೂ ಕೂಡ ಬೆಂಗಳೂರಿಗೆ ಕಳುಹಿಸಲಾಗಿತ್ತು. ಸೋಮವಾರ ವರದಿ ಬಂದಿದ್ದು, ಸೋಂಕು ಇರುವುದು ದೃಢಪಟ್ಟಿದೆ' ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
'ಈಗಾಗಲೇ ಇಬ್ಬರೂ ವ್ಯಕ್ತಿಗಳ ಸಂಪರ್ಕದಲ್ಲಿದ್ದವರನ್ನು ಸಂಪರ್ಕಿಸಲು ಕ್ರಮ ಕೈಗೊಳ್ಳಲಾಗಿದೆ. ಭಟ್ಕಳ ಪಟ್ಟಣವನ್ನು ಕ್ಲಸ್ಟರ್ ಎಂದು ಪರಿಗಣಿಸಿ ಅಲ್ಲಿ ಜಿಲ್ಲಾ ಪಂಚಾಯತಿ ಸಿಇಒ ಮೊಹಮ್ಮದ್ ರೋಶನ್ ಅವರು ಮೊಕ್ಕಾಂ ಹೂಡಿದ್ದಾರೆ. ಪಟ್ಟಣವನ್ನು ಲಾಕ್ ಡೌನ್ ಮಾಡಲಾಗಿದ್ದು ಅಗತ್ಯ ಚಟವಟಿಕೆಗಳನ್ನು ಹೊರತುಪಡಿಸಿ ಉಳಿದೆಲ್ಲವನ್ನು ನಿಷೇಧ ಮಾಡಲಾಗಿದೆ. ಅಗತ್ಯ ಬಿದ್ದರೆ ಮನೆಮನೆಗಳಿಗೆ ಅಗತ್ಯ ವಸ್ತುಗಳನ್ನು ಜಿಲ್ಲಾಡಳಿತದಿಂದಲೇ ಪೂರೈಸಲಾಗುವುದು'"ಎಂದು ಕೂಡ ಜಿಲ್ಲಾಧಿಕಾರಿ ತಿಳಿಸಿದರು.
''ಜಿಲ್ಲಾಡಳಿತ ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮ, ಆಕಾಶವಾಣಿಯಲ್ಲಿ ಮಾಹಿತಿಗಳನ್ನು ಹಂಚಿಕೊಳ್ಳಲಿದೆ. ಸಾರ್ವಜನಿಕರು ಮನೆಯಲ್ಲಿದ್ದು, ಜಾಗರೂಕರಾಗಿರಿ. ಸುಳ್ಳು ಸುದ್ದಿಗಳಿಗೆ ಗಮನ ಕೊಡಬೇಡಿ'' ಎಂದು ಅವರು ಜಿಲ್ಲಾಧಿಕಾರಿ ಮನವಿ ಮಾಡಿದರು.