ಚಿತ್ರದುರ್ಗ: ಶನಿವಾರ ಸಂಜೆಯಂದು ಹಿರಿಯೂರು ತಾಲೂಕಿನ ಹರ್ತಿಕೋಟೆ ಮತ್ತು ಬಾಲೇನಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಒಂದೇ ಕುಟುಂಬದ ಮೂವರು ಮಂದಿ ಸ್ಥಳದಲ್ಲಿಯೇ ಧಾರುಣವಾಗಿ ಸಾವನ್ನಪ್ಪಿದ್ದಾರೆ.
ಮೃತರನ್ನು ಚಳ್ಳಕೆರೆ ತಾಲೂಕಿನ ಕರಿಕೆರೆ ಗ್ರಾಮದ ಕಾರು ಚಾಲಕ ಪ್ರಭಾಕರ್(38),ನಾಗವೇಣಿ(45) ಹಾಗೂ ವೇಣು(20) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ವಿಶಾಲಾಕ್ಷಮ್ಮ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರು ಚಳ್ಳಕೆರೆಯಿಂದ ಬೆಂಗಳೂರು ಕಡೆಗೆ ಹೋಗುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಮುಂದೆ ಬರುತ್ತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು ಕಾರಿನ ಚಾಲಕನ ತಲೆ ಮತ್ತು ದೇಹ ಎರಡು ಬೇರೆಬೇರೆಯಾಗಿ ಅಪಘಾತದ ಭೀಕರತೆಯನ್ನು ತೋರಿಸುವಂತಿತ್ತು. ಘಟನೆಗೆ ಸಂಬಂಧಿಸಿದಂತೆ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.