ಕರ್ನಾಟಕ ಸರ್ಕಾರ ಇದೀಗ ಶೂನ್ಯ ಬಡ್ಡಿದರದಲ್ಲಿ ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಕಿರು ಸಾಲವನ್ನು ಒದಗಿಸುವ ದೃಷ್ಟಿಯಿಂದ ಬಡವರ ಬಂಧು ಎಂಬ ಯೋಜನೆಯನ್ನು ಜಾರಿಗೆ ತಂದಿದೆ.
ಪ್ರಸ್ತುತ ಯೋಜನೆಯನ್ನು ನಗರಸಭೆಯ ಸ್ಥಳೀಯ ಪ್ರದೇಶಗಳಲ್ಲಿ ಮಾತ್ರ ಆರಂಭಿಸಲಾಗಿದ್ದು ನೊಂದಾಯಿತ ಬೀದಿ ವ್ಯಾಪಾರಿಗಳು ಈ ಯೋಜನೆಯಡಿ ಸಾಲವನ್ನು ಪಡೆಯಬಹುದಾಗಿದೆ.
ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳು ಯಾರು?
1) ರಸ್ತೆ ಬದಿಯಲ್ಲಿ ತಳ್ಳುಬಂಡಿ, ಆಟೊಗಳಲ್ಲಿ ತಿಂಡಿ, ಊಟ ಹಾಗೂ ಪಾನೀಯ ಪದಾರ್ಥಗಳನ್ನು ಮಾರಾಟ ಮಾಡುವವರು.
2) ಮನೆಗಳ ಬಳಿ ತೆರಳಿ ತರಕಾರಿ, ಹೂ, ಕಾಯಿ ಮಾರುವವರು ಮತ್ತು ರಸ್ತೆ ಬದಿಯಲ್ಲಿ ಬುಟ್ಟಿ ವ್ಯಾಪಾರಿಗಳು.
3) ಪಾದರಕ್ಷೆಗಳು, ಚರ್ಮ ಉತ್ಪನ್ನಗಳ ರಿಪೇರಿ ಹಾಗೂ ಮಾರಾಟ ಮಾಡುವವರು ಮತ್ತು ಆಟದ ಸಾಮಾನು, ಇತರೆ ಗೃಹಪಯೋಗಿ ವಸ್ತುಗಳನ್ನು ಮಾರಾಟ ಮಾಡುವವರು.
ಸಾಲವನ್ನು ಪಡೆಯುವುದು ಹೇಗೆ?
1) ಮೊದಲನೆಯದಾಗಿ ನೋಂದಾಯಿತ ಬೀದಿಬದಿ ವ್ಯಾಪಾರಿಗಳು ಸಹಕಾರಿ ಬ್ಯಾಂಕುಗಳಲ್ಲಿ ಶೂನ್ಯ ಉಳಿತಾಯ ಖಾತೆ ತೆರೆಯಬೇಕು.
2) ಆನಂತರ ಸಹಕಾರಿ ಬ್ಯಾಂಕುಗಳಿಂದ ಅರ್ಜಿ ನಮೂನೆಯನ್ನು ಪಡೆದು ಅದನ್ನು ಭರ್ತಿ ಮಾಡಿ ಆಧಾರ್ ಕಾರ್ಡ, ಬಿಪಿಎಲ್ ಕಾರ್ಡ್, ವ್ಯಾಪಾರ ನಡೆಸುತ್ತಿರುವ ಸ್ಥಳದ ಫೋಟೋ ಮತ್ತು ಸ್ಥಳೀಯ ಸಂಸ್ಥೆಗಳು ನೀಡಿರುವ ಗುರುತಿನ ಚೀಟಿಯ ಜೊತೆಗೆ ಅರ್ಜಿಯನ್ನು ಸಲ್ಲಿಸಬೇಕು.
ಯೋಜನೆಯ ವಿವರಗಳು:
ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಮೂರರಿಂದ ಹತ್ತು ಸಾವಿರ ರೂಪಾಯಿ ತನಕ ಸಾಲಸೌಲಭ್ಯ ಸಿಗುತ್ತದೆ. ಇದು ಕೇವಲ ಆರು ತಿಂಗಳವರೆಗೆ ಇರುತ್ತದೆ. ಈ ಅವಧಿಯಲ್ಲಿ ಯಾವುದೇ ಬಡ್ಡಿಯನ್ನು ಪಾವತಿಸುವ ಅವಶ್ಯಕತೆಯಿಲ್ಲ. ಸಾಲವನ್ನು ಮರುಪಾವತಿ ಮಾಡಿದ ಮೇಲೆ ಮತ್ತೊಮ್ಮೆ ಸಾಲಕ್ಕೆ ಅಪ್ಲೈ ಮಾಡಬಹುದು. ಆ ಸಮಯದಲ್ಲಿ ಮೊದಲು ಸಿಕ್ಕ ಸಾಲದ ಮೇಲೆ ಶೇಕಡ 10 ರಷ್ಟು ಹೆಚ್ಚಿನ ಸಾಲ ಸಿಗುತ್ತದೆ.