ಕಾರವಾರ, ಆಗಸ್ಟ್ 31: ಸೆಪ್ಟೆಂಬರ್ ತಿಂಗಳಿನಿಂದ ಶುರುವಾಗಿ ಕೇಂದ್ರ ಸರ್ಕಾರ ಅಂತರರಾಜ್ಯ ಗಡಿಗಳನ್ನು ಮುಕ್ತಗೊಳಿಸುವಂತೆ ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿತ್ತು. ಆದರೆ ಇದಕ್ಕೆ ವಿರುದ್ಧವಾಗಿ ಗೋವಾ ಸರ್ಕಾರ ಮಾತ್ರ ತನ್ನ ರಾಜ್ಯಕ್ಕೆ ಯಾರಾದರೂ ಬರುವುದಾದರೆ ಅವರು ಕಡ್ಡಾಯವಾಗಿ ಕೋರುನ ಟೆಸ್ಟ್ ಮಾಡಲೇಬೇಕು ಎಂಬ ಪಟ್ಟು ಹಿಡಿದಿತ್ತು. ಈ ಕೊರೋನಾ ಟೆಸ್ಟ್ ಗಾಗಿ ಎರಡು ಸಾವಿರ ರೂಪಾಯಿಗಳನ್ನು ಪಾವತಿ ಮಾಡಬೇಕಿತ್ತು.
ಇದರಿಂದಾಗಿ ಹಲವಷ್ಟು ಮಂದಿ ಕೆಲಸಗಾರರಿಗೆ ಗೋವಾಕ್ಕೆ ಹೋಗಿ ಬರುವುದು ತುಂಬಾನೇ ಕಷ್ಟವಾಗಿತ್ತು. ಅಲ್ಲದೆ ₹2000 ಕೂಡ ತುಂಬಾ ಹೊರೆಯಾಗಿ ಪರಿಣಮಿಸಿತ್ತು.
ಇಂತಹ ಪ್ರಕ್ಷುಬ್ಧ ಸನ್ನಿವೇಶದಲ್ಲಿ ಕರ್ನಾಟಕ ಗೋವಾ ಗಡಿ ಭಾಗದ ಕಾರವಾರದ ವಾಟಳ್ ಪಕ್ಷದ ಜಿಲ್ಲಾಧ್ಯಕ್ಷ ರಾಘವನಾಯ್ಕ ನೇತ್ರತ್ವದಲ್ಲಿ ಪ್ರತಿಭಟನೆಯನ್ನು ನಡೆಸಿ ಗೋವಾ ತನ್ನ ನಡೆಯನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ಎಚ್ಚರಿಸಲಾಗಿತ್ತು.
ಇಷ್ಟಲ್ಲದೆ ಕಾರವಾರ ಅಂಕೋಲಾ ಕ್ಷೇತ್ರದ ಶಾಸಕಿ ಶ್ರೀಮತಿ ರೂಪಾಲಿ ನಾಯ್ಕ್ ಅವರು ಕೂಡ ಗೋವಾ ಮುಖ್ಯಮಂತ್ರಿಗೆ ಮನವಿಯನ್ನು ಮಾಡಿದ್ದರು. ಮನವಿಗೆ ಸ್ಪಂದಿಸಿದ ಗೋವಾ ಮುಖ್ಯಮಂತ್ರಿ ಸೆಪ್ಟೆಂಬರ್ ತಿಂಗಳಿನಿಂದ ಕರ್ನಾಟಕ ಮತ್ತು ಗೋವಾ ಗಡಿಯನ್ನು ಮುಕ್ತಗೊಳಿಸಲಾಗುವುದು ಎಂದು ಭರವಸೆಯನ್ನು ನೀಡಿದ್ದರು.
ಇದಕ್ಕೆ ಪೂರಕವಾಗಿ ಮಹಾರಾಷ್ಟ್ರ ಮೂಲದ ಪತ್ರಿಕೆಯ ಸಂದರ್ಶನವೊಂದರಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಸೆಪ್ಟೆಂಬರ್ 1ರಿಂದ ಕರ್ನಾಟಕ ಮತ್ತು ಗೋವಾ ಗಡಿ ಓಡಾಟವನ್ನು ಮುಕ್ತಗೊಳಿಸಲಾಗುವುದು ಎಂದು ಹೇಳಿದ್ದಾರೆ.