ಕಾನ್ಪುರ, ಮೇ 23: ಈಗಾಗಲೇ ಮೊದಲೇ ನಿಗದಿಯಾಗಿದ್ದ ಮದುವೆಯನ್ನು ಲಾಕ್ಡೌನ್ ನಡುವೆ ಹಾಗೋ ಹೀಗೋ ಹೇಗೋ ಮಾಡಿ ಮುಗಿಸಿದ ಕೆಲವು ಉದಾಹರಣೆಗಳನ್ನು ನೀವು ಈಗಾಗಲೇ ಕೇಳಿರುತ್ತೀರಿ. ಆದರೆ ಇಲ್ಲಿದೆ ನೋಡಿ ಅದಕ್ಕಿಂತ ಸಂಪೂರ್ಣ ಭಿನ್ನವಾದ ಘಟನೆ. ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯಲ್ಲಿ ಕೊರೋನ ಲಾಕ್ ಡೌನ್ ನಿಂದಾಗಿಯೇ ಒಂದು ಹೊಸ ಪ್ರೇಮ ಪ್ರಕರಣವು ಹುಟ್ಟಿಕೊಂಡು ಮತ್ತು ಅದು ಮದುವೆಯಾಗುವುದರ ಮೂಲಕ ಸುಖಾಂತ್ಯವನ್ನು ಕಂಡಿದೆ.
ನೀಲಂ ಎನ್ನುವ ಯುವತಿಯೊಬ್ಬಳು ತನ್ನ ತಂದೆ-ತಾಯಿ ನಿಧನರಾದ ಬಳಿಕ ಅಣ್ಣ ಮತ್ತು ಅತ್ತಿಗೆಯ ಜೊತೆ ವಾಸಿಸುತ್ತಿದ್ದಳು. ಆದರೆ ಅಣ್ಣ ಮತ್ತು ಅತ್ತಿಗೆ ಆಕೆಯನ್ನು ಅವರ ಮನೆಯಿಂದ ಹೊರಹಾಕಿದ್ದರು. ಇದರಿಂದಾಗಿ ಕಾನ್ಪುರದ ಕಾಕದೇವ್ ಎಂಬ ಪ್ರದೇಶದಲ್ಲಿ ಅಲ್ಲಿನ ಬಿಕ್ಷುಕರೊಂದಿಗೆ ಅವಳು ವಾಸ ಮಾಡಿಕೊಂಡಿದ್ದಳು. ಆದರೆ ಲಾಕ್ ಡೌನ್ ಘಟನೆಯ ನಂತರ ಹಸಿವನ್ನು ತಣಿಸಲು ಆಹಾರವು ಸಿಗದೇ ಕಂಗಾಲಾಗಿ ಹೋಗಿದ್ದಳು.
ಈ ಭಿಕ್ಷುಕರಿಗೆ ಪ್ರತಿದಿನ ಆಹಾರ ತಲುಪಿಸುವಂತೆ ಉದ್ಯಮಿ ಅವರು ತನ್ನ ಚಾಲಕ ಅನಿಲ್ ಗೆ ಸೂಚಿಸಿದ್ದರು. ಹಾಗೆ ಕಳೆದ 45 ದಿನಗಳಿಂದ ಪ್ರತಿದಿನ ಅನಿಲ್ ಈ ಭಿಕ್ಷುಕರ ಗುಂಪಿಗೆ ಆಹಾರ ತಲುಪಿಸುತ್ತಿದ್ದರು. ಪ್ರತಿದಿನದ ಭೇಟಿ ಅನಿಲ್ - ಹಾಗು ನೀಲಂ ನಡುವೆ ಪ್ರೇಮಾಂಕುರಕ್ಕೆ ಕಾರಣವಾಗಿದೆ.
ಈ ವಿಷಯವನ್ನು ತಿಳಿದ ಅನಿಲ್ ತಂದೆ ಕಾರ್ಯಪ್ರವೃತ್ತರಾಗಿ ಅವರು ನೀಲಂ ಎನ್ನುವ ಆ ಹುಡುಗಿಯ ಜೊತೆಗೆ ಮಾತನಾಡಿ ಅವಳ ಒಪ್ಪಿಗೆಯನ್ನು ಪಡೆದು ತಮ್ಮ ಮಗನ ವಿವಾಹವನ್ನು ಮಾಡಿ ಮುಗಿಸಿಬಿಟ್ಟರು.