ಸಿದ್ದಾಪುರ: ತಾಲ್ಲೂಕಿನಲ್ಲಿ ಇದುವರೆಗೆ ಕೊರೊನಾ ಸೋಂಕಿನ ಅಥವಾ ಕೊರೊನಾ ಶಂಕೆಯ ಯಾವುದೇ ಪ್ರಕರಣ ಕಂಡುಬಂದಿಲ್ಲ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಲಕ್ಷ್ಮೀಕಾಂತ ನಾಯ್ಕ ತಿಳಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಮಂಗಳವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಈ ಮಾಹಿತಿ ನೀಡಿದರು. ‘ತಾಲ್ಲೂಕಿಗೆ ವಿದೇಶದಿಂದ ಆಗಮಿಸಿರುವ ಏಳು ಜನರ ಮೇಲೆ ನಿಗಾ ಇಡಲಾಗಿದೆ. ಪಟ್ಟಣದ ಬಸ್ ನಿಲ್ದಾಣದಲ್ಲಿ ಕೊರೊನಾ ಹೆಲ್ಪ್ ಡೆಸ್ಕ್ ಆರಂಭಿಸಲಾಗಿದ್ದು, ಕೊರೊನಾ ಪೀಡಿತ ಪ್ರದೇಶದಿಂದ ಬಂದವರ ಮಾಹಿತಿ ಮತ್ತು ಸ್ವಯಂ ಘೋಷಣೆ ಪಡೆಯಲಾಗುತ್ತದೆ. ತಾಲ್ಲೂಕು ಆಸ್ಪತ್ರೆಯಲ್ಲಿ ಕೊರೊನಾ ಶಂಕಿತರ ಚಿಕಿತ್ಸೆಗೆ ವಾರ್ಡ್ ತೆರೆಯಲಾಗಿದೆ’ ಎಂದು ತಿಳಿಸಿದರು.
‘ಮಂಗನ ಕಾಯಿಲೆಗೆ ಸಂಬಂಧಿಸಿದಂತೆ ಈವರೆಗೆ 220 ಜನರ ರಕ್ತದ ಮಾದರಿಯನ್ನು ತಪಾಸಣೆಗೆ ಕಳುಹಿಸಲಾಗಿತ್ತು. ಅವರಲ್ಲಿ 10 ಜನರಲ್ಲಿ ಮಂಗನ ಕಾಯಿಲೆ ದೃಢಪಟ್ಟಿದೆ. ಇಬ್ಬರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 60ಕ್ಕೂ ಅಧಿಕ ಮಂಗಗಳು ಮೃತಪಟ್ಟಿವೆ. ಕಳೆದ ವರ್ಷ ತೀವ್ರವಾಗಿ ಮಂಗನ ಕಾಯಿಲೆ ಕಾಣಿಸಿಕೊಂಡಿದ್ದ ಬಾಳಗೋಡಿನಲ್ಲಿ ಈ ಬಾರಿ ಮಂಗ ಸತ್ತ ವರದಿ ಇಲ್ಲ’ ಎಂದರು. ತಹಶೀಲ್ದಾರ್ ಮಂಜುಳಾ ಭಜಂತ್ರಿ, ಉಪ ತಹಶೀಲ್ದಾರರಾದ ಎನ್.ಐ.ಗೌಡ ಹಾಗೂ ನಾಗರಾಜ ನಾಯ್ಕಡ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಕುಮಾರ ನಾಯ್ಕ, ಶಿಕ್ಷಣ ಇಲಾಖೆಯ ಮಹೇಶ ಹೆಗಡೆ ಇದ್ದರು.
ವಾರದ ಸಂತೆ ಸ್ಥಳಾಂತರ: ‘ಕೊರೊನಾ ಸೋಂಕಿನ ಮುಂಜಾಗ್ರತೆಯ ಕಾರಣದಿಂದ ಸಿದ್ದಾಪುರ ಪಟ್ಟಣದಲ್ಲಿ ಬುಧವಾರ ನಡೆಯುವ ವಾರದ ಸಂತೆಯನ್ನು ಸ್ಥಳೀಯ ನೆಹರೂ ಮೈದಾನಕ್ಕೆ ಸ್ಥಳಾಂತರ ಮಾಡಲಾಗಿದೆ. ಸಂತೆಯಲ್ಲಿ ತರಕಾರಿ ಹಾಗೂ ಹಣ್ಣುಗಳ ಮಾರಾಟಕ್ಕೆ ಅವಕಾಶವಿದ್ದು, ಸಂಜೆ 5ಕ್ಕೆ ಸಂತೆಯನ್ನು ಮುಕ್ತಾಯಗೊಳಿಸಬೇಕು. ಸಂತೆಯಲ್ಲಿ ಜನ ಜಂಗುಳಿ ಹೆಚ್ಚಾಗದಂತೆ ನೋಡಿಕೊಳ್ಳಲು ಪೊಲೀಸರ ನಿಯೋಜನೆ ಮಾಡಲಾಗುವುದು’ ಎಂದು ತಹಶೀಲ್ದಾರ್ ಮಂಜುಳಾ ಭಜಂತ್ರಿ ತಿಳಿಸಿದರು.
