ಗೋಕರ್ಣ: ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ವಿದೇಶದಿಂದ ಗೋಕರ್ಣಕ್ಕೆ ಬರುವ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ಕುಮಟಾ ಉಪವಿಭಾಗಾಧಿಕಾರಿ ಎಂ ಅಜಿತ್ ತಿಳಿಸಿದ್ದಾರೆ.
ಕಳೆದ ಮೂರು ದಿನಗಳಿಂದ ಮೌಖಿಕವಾಗಿ ಈ ಆದೇಶ ನೀಡಿದರೂ ಗೋಕರ್ಣದಲ್ಲಿ ಹೊಸದಾಗಿ ಬಂದ ವಿದೇಶಿಯರಿಗೆ ವಸತಿಗೃಹಗಳು ಸ್ಥಳ ನೀಡುತ್ತಿದ್ದು ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಕೆಲವರಂತೂ ಎರಡು ಮೂರು ದಿವಸದ ಹಿಂದೆ ದೇಶ ಬಿಟ್ಟವರಾಗಿದ್ದಾರೆ.
ಅವರಲ್ಲಿ ಫ್ರಾನ್ಸ್ ನ ಇಬ್ಬರು ಸಹ ಇದ್ದಿದ್ದು ಕಳವಳಕ್ಕೆ ಕಾರಣವಾಗಿದೆ. ಅಧಿಕಾರಿಗಳು ತೀವ್ರತೆಯಿಂದ ಕಾರ್ಯ ನಿರ್ವಹಿಸಿದರೂ ಸ್ಥಳೀಯರು ಸಹಕಾರ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳ ಚಿಂತೆಗೆ ಕಾರಣವೆಂದರೆ ಮಂಗಳವಾರ ಒಂದೇ ದಿವಸ 45ಕ್ಕೂ ಹೆಚ್ಚು ವಿದೇಶಿಗರು ಗೋಕರ್ಣಕ್ಕೆ ಬಂದಿದ್ದಾರೆ. ಅದರಲ್ಲಿ ಹೆಚ್ಚಿನವರು ಯುರೋಫ್ ದೇಶದವರು. ಚೆಕ್ ಪೋಸ್ಟ್ ನಲ್ಲಿ ಆರೋಗ್ಯ ಸಿಬ್ಬಂದಿ ತಪಾಸಣೆ ನಡೆಸಿದಾಗ ಈ ಸಂಗತಿ ಬೆಳಕಿಗೆ ಬಂದಿದೆ. ಆರು ಜನ ವಿದೇಶಿ ಪ್ರವಾಸಿಗರನ್ನು ತಿರುಗಿ ಗೋವಾಕ್ಕೆ ಕಳುಹಿಸಲಾಗಿದೆ.
ಕುಮಟಾ ಉಪವಿಭಾಗಾಧಿಕಾರಿ ಎಂ.ಅಜಿತ್ ತಾವೇ ಸ್ವತಃ ಕಾರ್ಯಾಚರಣೆಗೆ ಇಳಿದು ಪೊಲೀಸರ ನೆರವಿನಿಂದ ಕುಡ್ಲೆ, ಓಂ ಬೀಚ್ ಗಳಿಗೆ ಭೇಟಿ ನೀಡಿ ಅಂಗಡಿ, ರೆಸಾರ್ಟ್ ಗಳನ್ನು ಮುಚ್ಚಿಸಿದ್ದಾರೆ. ಅಲ್ಲಿ ಇರುವ ಹೊಸದಾಗಿ ಬಂದ ವಿದೇಶಿಯರಿಗೆ ತೆರವುಗೊಳಿಸುವಂತೆ ತಿಳಿಸಿದ್ದಾರೆ.
