ಕಾರವಾರ, ಮಾರ್ಚ್ 23: ವಿದೇಶ ಪ್ರಯಾಣದಿಂದ ಹಿಂದಿರುಗಿದವರಲ್ಲೇ ಹೆಚ್ಚಾಗಿ ಕೊರುನ ವೈರಸ್ ರೋಗದ ಲಕ್ಷಣಗಳು ಕಂಡುಬರುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಉಪವಿಭಾಗದ ಹೆಚ್ಚಿನ ಜನರು ವಿದೇಶದಲ್ಲಿ ಉದ್ಯೋಗದಲ್ಲಿದ್ದು ಅಲ್ಲಿಂದ ತವರಿಗೆ ಹಿಂದಿರುಗುತ್ತಿದ್ದಾರೆ. ಇದರಿಂದಾಗಿ ಮಾ. 24 ರಿಂದ 31 ರವರೆಗೆ ಜೀವನಾವಶ್ಯ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದೆಲ್ಲವನ್ನೂ ನಿಷೇಧಿಸಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಹೇಳಿದರು.
ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಾರ್ವಜನಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು ದೇಶದಲ್ಲಿ ಮತ್ತು ರಾಜ್ಯದಲ್ಲಿ ಕೋರೋಣ ವೈರಸ್ ವೈರಾಣುಗಳಿಂದ ಸೋಂಕಿತರಾದವರ ಸಂಖ್ಯೆ ದಿನದಿಂದ ದಿನಕ್ಕೆ ವೃದ್ಧಿಸುತ್ತಲೇ ಇದೆ. ಸೋಂಕಿತರ ಒಡನಾಟದಲ್ಲಿರುವ ಎಲ್ಲರಿಗೂ ಈ ರೋಗದ ಲಕ್ಷಣಗಳು ಕಂಡುಬರುತ್ತಿರುವುದು ವೈದ್ಯಕೀಯವಾಗಿ ಸಾಬೀತಾಗಿದೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಈಗಾಗಲೇ ಸಾರ್ವಜನಿಕರಿಗೆ ಮುಂಜಾಗ್ರತಾ ಕ್ರಮವಾಗಿ ನಿಗದಿತ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಸೂಚನೆ ನೀಡಿದ್ದರೂ ಸಹ ಸಾರ್ವಜನಿಕರು ಸಕಾರಾತ್ಮಕವಾಗಿ ಸ್ಪಂದಿಸದೇ ವಿದೇಶದಿಂದ ಹಿಂದಿರುಗಿದವರ ಸತತ ಒಡನಾಟಲ್ಲಿರುವುದು ಕಂಡು ಬಂದಿರುತ್ತದೆ. ಅಧಿಕಾರಿಗಳು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಅವರ ಮೇಲೆ ಸತತ ಕಣ್ಗಾವಲು ಇಟ್ಟಿದ್ದರೂ ಕೋರೋಣ ವೈರಸ್ ವೈರಾಣುಗಳ ಹರಡುವಿಕೆಯ ಗತಿಯನ್ನು ಪರಿಗಣಿಸಿ ಭಟ್ಕಳ ಉಪವಿಭಾಗದಲ್ಲಿ ರೋಗದ ಹರಡುವಿಕೆಯನ್ನು ತಡೆಗಟ್ಟಲು ಇನ್ನಷ್ಟು ಬಿಗಿಯಾದ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದು ಅವರು ಹೇಳಿದರು.