ಕದಂಬೋತ್ಸವ ಆಚರಣೆಗೆ ಬಜೆಟ್ ನಲ್ಲೇ ಅನುದಾನ ನಿಗದಿಗೆ ಚಿಂತನೆ : ಸಾಂಸ್ಕೃತಿಕ ನಡಿಗೆಗೆ ಜಿಲ್ಲಾಧಿಕಾರಿ ಚಾಲನೆ

Banavasi Kadambotsava 2020


ಬನವಾಸಿ(ಶಿರಸಿ)ಫೆ.9(ಕರ್ನಾಟಕ ವಾರ್ತೆ): ಕದಂಬೋತ್ಸವ ಆಚರಣೆಗೆ ‌ಸರ್ಕಾರ ಬಜೆಟ್ ನಲ್ಲೇ ಅನುದಾನ ನಿಗದಿ ಮಾಡುವ ಸಾಧ್ಯತೆಯಿದೆ‌ ಎಂದು‌ ಜಿಲ್ಲಾಧಿಕಾರಿ ಡಾ. ಕೆ ಹರೀಶ್ ಕುಮಾರ್ ಹೇಳಿದರು.


ಬನವಾಸಿ ಮಧುಕೇಶ್ವರ ದೇವಸ್ಥಾನದ ಬಳಿ ಕದಂಬೋತ್ಸವ ನಿಮಿತ್ತ ಏರ್ಪಟ್ಟ ಸಾಂಸ್ಕೃತಿಕ ನಡಿಗೆಗೆ ರವಿವಾರ ಚಾಲನೆ ನೀಡಿ ಮಾತನಾಡಿದರು.


ಬೆಳಿಗ್ಗೆ ‌8:30ಕ್ಕೆ ಕನ್ನಡ ಸಾಹಿತಿಗಳ, ಸಾಮಾಜಿಕ ಕ್ಷೇತ್ರದ ಗಣ್ಯರ ಸಮ್ಮುಖದಲ್ಲಿ ಸಾಂಸ್ಕೃತಿಕ ನಡಿಗೆಗೆ ಚಾಲನೆ‌ ನೀಡಿದ ಜಿಲ್ಲಾಧಿಕಾರಿ ಕದಂಬೋತ್ಸವ‌ ಪ್ರತಿವರ್ಷ ನಿಗದಿತ ದಿನಾಂಕದಲ್ಲಿ ನಡೆಯುವಂತೆ ಸರ್ಕಾರ ನೀತಿ‌ ರೂಪಿಸಲಿದೆ. ಅನುದಾನ ಸಹ‌‌ ನಿಗದಿ ಮಾಡಲಿದೆ ಎಂದು ಕನ್ನಡ ಸಂಸ್ಕೃತಿ ಇಲಾಖೆಯ ಸಚಿವರು‌ ಹೇಳಿದ್ದಾರೆ. ಹಾಗಾಗಿ ಮುಂದಿನ‌ ದಿನಗಳಲ್ಲಿ ಕದಂಬೋತ್ಸವ ಕ್ಕೆ ಅನುದಾನದ ಕೊರತೆಯಿರುವುದಿಲ್ಲ ಎಂದು ತಿಳಿಸಿದರು.


ಸಮುದಾಯ ಸಾಂಸ್ಕೃತಿಕ ‌ಮಹತ್ವದ ನಡಿಗೆಯಲ್ಲಿ ಭಾಗವಹಿಸುವಂತಾಗಬೇಕು. ಕದಂಬೋತ್ಸವ ಅಧಿಕಾರಗಳ ,ಜನಪ್ರತಿನಿಧಿಗಳ ಉತ್ಸವವಲ್ಲ.‌ಇಲ್ಲಿ ವೇದಿಕೆ ಸಿಗದವರು ಉತ್ಸವದ ಕಡೆಗೆ ಬರುವುದಿಲ್ಲ.‌ಇಂಥ‌ ಮನೋಭಾವ ಬಿಟ್ಟು , ವಿಶಾಲ‌ ಮನೋಭಾವ ಬೆಳಸಿಕೊಳ್ಳಬೇಕು. ಇಲ್ಲಿ ಕೀರ್ತಿ,ಪ್ರಸಿದ್ದಿಗಿಂತ , ಕದಂಬೋತ್ಸವ ನಾಡಿನ‌ ಹಬ್ಬವಾಗಿ ಬದಲಾಗಬೇಕು‌ ಎಂದರು.‌ ಹಬ್ಬದ ಸಂಭ್ರಮ ಬನವಾಸಿಯಲ್ಲಿ ಹರಡಬೇಕು ಎಂದರು. ಇಂತ ನಡಿಗೆಗಳಿಗೆ ಆರಂಭದಲ್ಲಿ ಉತ್ಸಾಹ ಇಲ್ಲದಿದ್ದರೂ, ಇಂತ ಸಣ್ಣ ಪ್ರಯತ್ನಗಳು ಮುಂದೆ ದೊಡ್ಡ ಬದಲಾವಣೆ ತರುತ್ತವೆ ಎಂದು‌ ಜಿಲ್ಲಾಧಿಕಾರಿ ಹರೀಶ್ ಕುಮಾರ್ ಅಭಿಪ್ರಾಯಪಟ್ಟರು.


ಜಿಲ್ಲಾ‌ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅರವಿಂದ ‌ಕರ್ಕಿಕೋಡಿ ಪ್ರಸ್ತಾವಿಕವಾಗಿ ಮಾತನಾಡಿ, ಎಲ್ಲರನ್ನು ಸ್ವಾಗತಿಸಿದರು.‌ಕದಂಬೋತ್ಸವ ಕನ್ನಡಿಗರ ಹೆಮ್ಮೆಯ ಉತ್ಸವ ಎಂದು ಹೇಳಿದರು.
ಟಿ.ಜಿ.ನಾಡಿಗೇರ ಮಾತನಾಡಿ ಕದಂಬರು ಇಲ್ಲಿ ‌ಮಧುಮಹೋತ್ಸವ ಆಚರಿಸುತ್ತಿದ್ದರು.‌ ಸೋಂದೆ ಅರಸರು ವಸಂತೋತ್ಸವ ಆಚರಿಸುತ್ತಿದ್ದರು. ಈಗ ಸರ್ಕಾರ ಕದಂಬೋತ್ಸವ ಆಚರಿಸುತ್ತಿದೆ.‌ಮುಂದೆ ಈ ಉತ್ಸವಕ್ಕೆ ಹೆಚ್ಚಿನ ಅನುದಾನ‌ ಸಿಗಲಿ.ಕ್ಷೇತ್ರದ ಅಭಿವೃದ್ಧಿ ಆಗಲಿ ಎಂದು ಹೇಳಿದರು.


ಸಾಂಸ್ಕೃತಿಕ ‌ನಡಿಗೆಯಲ್ಲಿ‌ ಕವಯಿತ್ರಿ ಶೋಭಾ ನಾಯ್ಕ ಹಿರೇಕೈ, ರತ್ನಾಕರ, ಕಾರವಾರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗರಾಜ ಹರಪನಹಳ್ಳಿ, ಕದಂಬ ಸೇನೆಯ‌‌ ಉದಯ್ ಕುಮಾರ್ ಕಾನಳ್ಳಿ, ಚಂದ್ರು, ಗಣೇಶ್ , ಶಿರಸಿ ತಹಶಿಲ್ದಾರ, ಯಲ್ಲಾಪುರ ಡಿ.ಜಿ.ಹೆಗಡೆ, ಈಶ್ವರ ಉಳ್ಳಾಗಡ್ಡಿ ಸೇರಿದಂತೆ ಮಹಿಳೆಯರು,ಮಕ್ಕಳು, ಈಶ್ವರಿ ವಿಶ್ವವಿದ್ಯಾಲಯದ ಅನುಯಾಯಿಗಳು‌ ಭಾಗವಹಿಸಿದ್ದರು. ಮಧುಕೇಶ್ವರ ದೇವಸ್ಥಾನ ದಿಂದ ಬನವಾಸಿ ಮುಖ್ಯ ಬೀದಿಗಳಲ್ಲಿ ಕನ್ನಡ ಪರ ಘೋಷಣೆಗಳು ಮೊಳಗಿದವು. 9 ಕಿ.ಮೀ ಕನ್ನಡದ ಕವಿಗಳ ಘೋಷ ವಾಕ್ಯಗಳು ಮೊಳಗಿದವು. ಸಾಂಸ್ಕೃತಿಕ ನಡಿಗೆ ಕದಂಬೋತ್ಸವಕ್ಕೆ ಮೆರುಗು ನೀಡಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement