ಕುಮಟಾ ತಾಲೂಕಿನ ಹೆಗಡೆ ಗ್ರಾಮ ಪಂಚಾಯಿತಿ ಮಚಗೋನ ಕ್ರಾಸ್ 3 ಇದೀಗ ರಾಜ್ಯಾದ್ಯಂತ ಸುದ್ದಿಯಲ್ಲಿದೆ. ಇದಕ್ಕೆ ಕಾರಣ ಕನ್ನಡ ಚಲನಚಿತ್ರರಂಗದ ನಟ ಹಾಗೂ ಜೊತೆ ಜೊತೆಯಲ್ಲಿ ಧಾರಾವಾಹಿಯ ನಟ ಅನಿರುದ್ಧ್ ಅವರ ಫೇಸ್ಬುಕ್ ಪೋಸ್ಟ್.
ಹೌದು, ನಟ ಅನಿರುದ್ಧ ಅವರು ತಮ್ಮ ಫೇಸ್ ಬುಕ್ ಪೇಜಿನಲ್ಲಿ ಸ್ವಚ್ಛತಾ ಆಂದೋಲನ ಅಭಿಯಾನವನ್ನು ಶುರುಮಾಡಿದ್ದಾರೆ. ಈ ಕಾರ್ಯದ ನಿಮಿತ್ತ ಅವರು ಸ್ವಚ್ಛತೆ ಇಲ್ಲದೆ ಕಸ ಒಂದೆಡೆ ಬಿಸಾಕುವ ಪ್ರದೇಶವನ್ನು ಆಯ್ದು ಆ ಚಿತ್ರವನ್ನು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಪ್ರಕಟಿಸುವುದರ ಮೂಲಕ ಆಡಳಿತ ವರ್ಗ ಅಲ್ಲಿನ ಕಸಗಳನ್ನು ವಿಲೇವಾರಿ ಮಾಡಿ ಸ್ವಚ್ಛತೆ ಕಾಯ್ದುಕೊಳ್ಳುವಂತೆ ಮನವಿ ಮಾಡಿದ್ದಾರೆ.
ಈ ಅಭಿಯಾನದಲ್ಲಿ ಅನಿರುದ್ಧ್ ಅವರು ಹಂಚಿಕೊಂಡ ಫೇಸ್ಬುಕ್ ಪೋಸ್ಟ್ನಲ್ಲಿ ಕುಮಟಾ ತಾಲೂಕಿನ ಹೆಗಡೆ ಗ್ರಾಮ ಪಂಚಾಯಿತಿ ಮಚಗೋನ ಕ್ರಾಸ್ 3 ಚಿತ್ರವೊಂದು ಬಂದಿದೆ. ಚಿತ್ರದಲ್ಲಿ ಕಸ ಕಡ್ಡಿಗಳ ರಾಶಿ ಇರುವುದನ್ನು ನಾವು ಕಾಣಬಹುದು. ಆ ಚಿತ್ರವನ್ನು ತಮ್ಮ ಫೇಸ್ಬುಕ್ ಪೇಜಿನಲ್ಲಿ ಪ್ರಕಟಿಸುವುದರ ಮೂಲಕ ಅನಿರುದ್ಧ ಅವರು ಸ್ಥಳೀಯರಲ್ಲಿ ಅಧಿಕಾರಿಗಳಲ್ಲಿ ಮತ್ತು ಜನಪ್ರತಿನಿಧಿಗಳಲ್ಲಿ ಕಸಕಡ್ಡಿ ತುಂಬಿರುವ ಜಾಗದಲ್ಲಿ ಒಂದು ಕಸದ ಬುಟ್ಟಿಯನ್ನು ಇಡುವಂತೆ ಮನವಿ ಮಾಡಿದ್ದಾರೆ. ಈ ಮೂಲಕ ಅವರು ತಮ್ಮಲ್ಲಿರುವ ಸ್ವಚ್ಛತಾ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ.