ಶಿರಸಿ: ಮಂಗನ ಖಾಯಿಲೆ(Mpox) ಪರೀಕ್ಷೆಗಾಗಿ ವಿಶೇಷ ಲ್ಯಾಬ್ ಸ್ಥಾಪಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡು ರಾವ್ ಮಾಹಿತಿ ನೀಡಿದ್ದು, ರಾಜ್ಯದ ಆರೋಗ್ಯ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ಉದ್ದೇಶ ಇದಾಗಿದೆ ಎಂದು ಹೇಳಿದರು.
ಉತ್ತರ ಕನ್ನಡ ಜಿಲ್ಲೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಶಂಕಿತ ಪ್ರಕರಣಗಳು ಕಂಡುಬಂದಾಗ ತ್ವರಿತವಾಗಿ ಪರೀಕ್ಷೆ ನಡೆಸಲು ಈ ಲ್ಯಾಬ್ ಸಹಕಾರಿಯಾಗಲಿದೆ. ಇದರಿಂದ ಮಾದರಿಗಳನ್ನು ದೂರದ ನಗರಗಳಿಗೆ ಕಳುಹಿಸುವ ಅವಶ್ಯಕತೆ ಕಡಿಮೆಯಾಗುತ್ತದೆ ಮತ್ತು ವರದಿ ಪಡೆಯುವ ಸಮಯವೂ ಗಣನೀಯವಾಗಿ ಕುಗ್ಗಲಿದೆ.
ಸಾರ್ವಜನಿಕ ಆರೋಗ್ಯ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಅಗತ್ಯ ಯಂತ್ರೋಪಕರಣಗಳು, ತಾಂತ್ರಿಕ ಸಿಬ್ಬಂದಿ ಹಾಗೂ ಸುರಕ್ಷತಾ ಕ್ರಮಗಳನ್ನು ಲ್ಯಾಬ್‌ನಲ್ಲಿ ಒದಗಿಸಲಾಗುತ್ತದೆ. ರೋಗ ಪತ್ತೆ, ಮೇಲ್ವಿಚಾರಣೆ ಮತ್ತು ತಡೆಗಟ್ಟುವ ಕ್ರಮಗಳನ್ನು ಸಮರ್ಪಕವಾಗಿ ಜಾರಿಗೆ ತರುವಲ್ಲಿ ಈ ಕೇಂದ್ರ ಪ್ರಮುಖ ಪಾತ್ರ ವಹಿಸಲಿದೆ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.
ಮಂಗನಕಾಯಿಲೆ ಕುರಿತು ಜನರಲ್ಲಿ ಅತಂಕ ಬೇಡ, ಆದರೆ ಎಚ್ಚರಿಕೆ ಅಗತ್ಯ ಎಂದು ಸಚಿವರು ಮನವಿ ಮಾಡಿದರು. ಲಕ್ಷಣಗಳು ಕಂಡುಬಂದರೆ ತಕ್ಷಣವೇ ಆರೋಗ್ಯ ಕೇಂದ್ರವನ್ನು ಸಂಪರ್ಕಿಸುವಂತೆ ಮತ್ತು ಇಲಾಖೆಯ ಮಾರ್ಗಸೂಚಿಗಳನ್ನು ಪಾಲಿಸುವಂತೆ ಸಾರ್ವಜನಿಕರಿಗೆ ಸಲಹೆ ನೀಡಲಾಗಿದೆ.