ಮಹಿಳಾ ಉದ್ಯೋಗಿಗಳ ಆರೋಗ್ಯ ಹಾಗೂ ಕಾರ್ಯಕ್ಷಮತೆಯನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಶಿಕ್ಷಣ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ನು ಮುಂದೆ ಮಹಿಳಾ ಉದ್ಯೋಗಿಗಳಿಗೆ ಪ್ರತಿ ತಿಂಗಳು ಒಂದು ದಿನ ಋತುಚಕ್ರ (ಮೆನ್ಸ್ರುಯಲ್) ರಜೆ ನೀಡಲು ಅಧಿಕೃತ ಆದೇಶ ಜಾರಿಯಾಗಿದೆ. ಈ ಮೂಲಕ ವರ್ಷಕ್ಕೆ ಒಟ್ಟು 12 ದಿನಗಳ ವಿಶೇಷ ರಜೆ ಸಿಗಲಿದೆ.
ಈ ರಜೆ ವೇತನ ಸಹಿತವಾಗಿದ್ದು, ಮಹಿಳೆಯರು ತಮ್ಮ ಆರೋಗ್ಯದ ಕಾರಣ ಯಾವುದೇ ಒತ್ತಡವಿಲ್ಲದೆ ಬಳಸಿಕೊಳ್ಳಬಹುದಾಗಿದೆ. ರಜೆ ಪಡೆಯಲು ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸುವ ಅಗತ್ಯವಿಲ್ಲ ಎನ್ನುವುದು ಆದೇಶದ ಪ್ರಮುಖ ಅಂಶವಾಗಿದೆ.
ಅಧಿಕೃತ ಮಾಹಿತಿಯ ಪ್ರಕಾರ, ಈ ರಜೆ ತಿಂಗಳಿಗೆ ಒಂದು ದಿನ ಮಾತ್ರ ಅನ್ವಯವಾಗುತ್ತದೆ. ಬಳಸದ ರಜೆಯನ್ನು ಮುಂದಿನ ತಿಂಗಳಿಗೆ ವರ್ಗಾಯಿಸುವ ಅವಕಾಶ ಇರುವುದಿಲ್ಲ. ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಉದ್ಯೋಗಿಗಳಿಗೆ ಈ ನಿಯಮ ಅನ್ವಯವಾಗಲಿದೆ.
ಮಹಿಳೆಯರ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಬೆಂಬಲ ನೀಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇಲಾಖೆ ತಿಳಿಸಿದೆ. ಈ ಆದೇಶವು ಮಹಿಳಾ ಸ್ನೇಹಿ ಕೆಲಸದ ವಾತಾವರಣ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.