ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಮಾಹಿತಿಯ ವಿಚಾರವಾಗಿ ಕರ್ನಾಟಕ ವಿಧಾನಸಭೆಯಲ್ಲಿ ಭಾರೀ ಗದ್ದಲ ಉಂಟಾಯಿತು. ಯೋಜನೆಯ ಹಣ ವಿತರಣೆಗೆ ಸಂಬಂಧಿಸಿ ಸದನದಲ್ಲಿ ತಪ್ಪು ಮಾಹಿತಿ ನೀಡಲಾಗಿದೆ ಎಂಬ ಆರೋಪದೊಂದಿಗೆ ವಿರೋಧ ಪಕ್ಷ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಇದರಿಂದಾಗಿ ಕೆಲಕಾಲ ಸಭೆಯ ಕಾರ್ಯಾಚರಣೆ ಅಸ್ತವ್ಯಸ್ತವಾಯಿತು.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಹಣ ಜಮಾ ಕುರಿತು ಮಾಹಿತಿ ನೀಡಿದ ವೇಳೆ, ಆ ವಿವರಗಳು ವಾಸ್ತವಕ್ಕೆ ತಾಳೆಯಾಗುವುದಿಲ್ಲ ಎಂದು ಬಿಜೆಪಿ ಸದಸ್ಯರು ಆರೋಪಿಸಿದರು. ತಮ್ಮ ಬಳಿ ಇರುವ ದಾಖಲೆಗಳನ್ನು ಉಲ್ಲೇಖಿಸಿ, ಕೆಲವು ತಿಂಗಳ ಹಣ ಇನ್ನೂ ಮಹಿಳೆಯರ ಖಾತೆಗೆ ಜಮಾ ಆಗಿಲ್ಲ ಎಂದು ವಿರೋಧ ಪಕ್ಷ ಸದನದ ಗಮನ ಸೆಳೆಯಿತು.
ಈ ವಿಚಾರದಲ್ಲಿ ಸದನದೊಳಗೆ ತೀವ್ರ ವಾಗ್ವಾದ ನಡೆಯಿತು. ಬಿಜೆಪಿ ಶಾಸಕರು ಸದನದ ಮಧ್ಯಭಾಗಕ್ಕೆ ಬಂದು ಪ್ರತಿಭಟನೆ ನಡೆಸಿದ ಪರಿಣಾಮ ಸಭೆಯಲ್ಲಿ ಗದ್ದಲ ಉಂಟಾಯಿತು. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವಿನ ಮಾತಿನ ಚಕಮಕಿ ಮತ್ತಷ್ಟು ತೀವ್ರಗೊಂಡಿತು.
ಗದ್ದಲದ ನಡುವೆಯೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಮ್ಮ ಮಾತುಗಳಿಂದ ಗೊಂದಲ ಉಂಟಾದಿದ್ದರೆ ವಿಷಾದ ವ್ಯಕ್ತಪಡಿಸಿದರು. ತಪ್ಪು ಮಾಹಿತಿ ನೀಡುವ ಉದ್ದೇಶ ನನಗಿರಲಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಸಂಬಂಧಿಸಿದ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸರಿಯಾದ ವಿವರಗಳನ್ನು ಸದನಕ್ಕೆ ನೀಡುವುದಾಗಿ ಭರವಸೆ ನೀಡಿದರು.
ಆದರೆ ಬಿಜೆಪಿ ಸದಸ್ಯರು ಕೇವಲ ವಿಷಾದ ಸಾಕಾಗುವುದಿಲ್ಲ, ಸಚಿವೆ ಸ್ಪಷ್ಟವಾಗಿ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದರು. ಈ ವಿಚಾರದಲ್ಲಿ ಸರ್ಕಾರದ ನಿಲುವನ್ನು ಪ್ರಶ್ನಿಸಿದ ಅವರು, ಜನಸಾಮಾನ್ಯರಿಗೆ ಸಂಬಂಧಿಸಿದ ಮಹತ್ವದ ಯೋಜನೆ ಕುರಿತು ಸ್ಪಷ್ಟತೆ ಅಗತ್ಯ ಎಂದು ಆಗ್ರಹಿಸಿದರು.
ಗೃಹಲಕ್ಷ್ಮಿ ಯೋಜನೆ ರಾಜ್ಯದ ಲಕ್ಷಾಂತರ ಮಹಿಳೆಯರ ಜೀವನಾಧಾರವಾಗಿರುವ ಮಹತ್ವದ ಯೋಜನೆ ಆಗಿರುವುದರಿಂದ, ಇದಕ್ಕೆ ಸಂಬಂಧಿಸಿದ ಮಾಹಿತಿಯಲ್ಲಿ ಯಾವುದೇ ಗೊಂದಲ ಉಂಟಾಗಬಾರದು ಎಂಬ ಅಭಿಪ್ರಾಯ ಸದನದಲ್ಲಿ ವ್ಯಕ್ತವಾಯಿತು. ಈ ಬೆಳವಣಿಗೆಯಿಂದ ಚಳಿಗಾಲದ ಅಧಿವೇಶನದಲ್ಲಿ ರಾಜಕೀಯ ತಾಪಮಾನ ಮತ್ತಷ್ಟು ಏರಿಕೆಯಾಯಿತು.