ಮೈಸೂರಿನಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ನಮಗೆ ಇನ್ನೂ ಎರಡು ವಾರಗಳ ಕಾಲ ಸಮಯಾವಕಾಶ ಕೊಡಿ, ನಾವು ವೈರಸ್ ನಿಯಂತ್ರಣಕ್ಕೆ ತರುವುದಾಗಿ ಪ್ರಸ್ತುತ ಮೈಸೂರು ಜಿಲ್ಲೆಯ ಜಿಲ್ಲಾಧಿಕಾರಿ ಆಗಿರುವ ರೋಹಿಣಿ ಸಿಂಧೂರಿ ಅವರು ಕಾಲಾವಕಾಶ ಕೋರಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಕೊರೋನಾ ವೈರಸ್ ಸೋಂಕು ನಿಯಂತ್ರಣ ಸಭೆ ಮೈಸೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆದಿದ್ದು ಸಭೆಯ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾಕ್ಟರ್ ಕೆ ಸುಧಾಕರ್ ಅವರು, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಬಹಳ ವಿಶ್ವಾಸ ಮತ್ತು ವಿನಯಪೂರ್ವಕವಾಗಿ ಕಾಲಾವಕಾಶವನ್ನು ಕೋರಿದ್ದಾರೆ. ಅದಕ್ಕೆ ಬೇಕಾಗಿರುವ ಕಾಲಾವಕಾಶವನ್ನು ನಾವು ಮಾಡಿಕೊಟ್ಟಿದ್ದೇವೆ ಹಾಗೂ ಈ ಸಲ ನಡೆಯುವ ದಸರಾ ಹಬ್ಬವನ್ನು ತೀರಾ ಸರಳವಾಗಿ ಮಾಡುವ ಅವಶ್ಯಕತೆ ಇದೆ ಎಂದು ಅವರು ಹೇಳಿದರು.
ಈ ವಿಷಯದ ಬಗ್ಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಸಭೆ, ಸಮಾಲೋಚನೆಯನ್ನು ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.
