ಲಾರಿ ಚಾಲಕನೊಬ್ಬ ನೀರಿನ ಪ್ರವಾಹದಿಂದ ತನ್ನ ಜೀವನವನ್ನು ರಕ್ಷಿಸಿಕೊಳ್ಳಲು ಮಾಡಿದ ಪ್ರಯತ್ನ ಹಾಗೂ ಆತನನ್ನು ರಕ್ಷಿಸಲು ರಕ್ಷಣಾ ಪಡೆಗಳು ಮಾಡಿದ ಪ್ರಯತ್ನ ಎಲ್ಲವೂ ವ್ಯರ್ಥವಾಯಿತು. ಕೊನೆಗೂ ಕೂಡ ಲಾರಿ ಚಾಲಕನ ಜೀವವನ್ನು ಉಳಿಸಲಾಗಲಿಲ್ಲ.
ಇಂತಹದೊಂದು ದುರ್ಘಟನೆ ನಡೆದಿರುವುದು ತೆಲಂಗಾಣ ರಾಜ್ಯದ ಅಡಿಲಾಬಾದ್ ಜಿಲ್ಲೆಯಲ್ಲಿ. ಮೃತ ಲಾರಿ ಚಾಲಕನನ್ನು ಮುಡಿಗೊಂಡ ಶಂಕರ್ (35) ಎಂದು ಗುರುತಿಸಲಾಗಿದೆ. ಈತ ಮೃತಪಟ್ಟಿದ್ದು ಕೊಹೆಡಾ ಮಂಡಲ್ನಲ್ಲಿರುವ ಬಸ್ವಾಪುರ ಎಂಬ ಗ್ರಾಮದಲ್ಲಿ.
ಈತನು ತನ್ನ ಲಾರಿಯಲ್ಲಿ ಸಿದ್ದಿಪೇಟ್ನಿಂದ ಹಂಸಾಬಾದ್ಗೆ ತೆರಳುತ್ತಿದ್ದ. ಮುಂಜಾನೆ ಸರಿಸುಮಾರು ನಾಲ್ಕು ಗಂಟೆ ಹೊತ್ತಿಗೆ ಬಸ್ವಾಪುರ ಸೇತುವೆ ಬಳಿ ಬರುತ್ತಿದ್ದಾಗ ಅಲ್ಲಿ ಪ್ರವಾಹ ಒಂದೇ ಸಮನೆ ಏರುತ್ತಿತ್ತು. ಅದನ್ನು ಲೆಕ್ಕಿಸದೆ ಚಾಲಕನು ಲಾರಿಯನ್ನು ಮುಂದೆ ಡ್ರೈವ್ ಮಾಡಲು ಪ್ರಯತ್ನಿಸಿದ. ಆದರೆ ರಸ್ತೆ ಮಧ್ಯೆ ಸ್ವಲ್ಪ ದೂರ ಬರುತ್ತಿದ್ದಂತೆ ಲಾರಿ ಒಂದೇ ಸಮನೆ ಅಲುಗಾಡಲು ಶುರುವಾಗಿದೆ. ಅಪಾಯದ ಮುನ್ಸೂಚನೆಯನ್ನು ಅರಿತ ಲಾರಿ ಚಾಲಕ ಶಂಕರ್ ಅಲ್ಲೇ ಇದ್ದ ಮರವನ್ನು ಏರಿದ್ದಾನೆ. ಅದೇ ಲಾರಿಯಲ್ಲಿದ್ದ ಕ್ಲೀನರ್ ಧರ್ಮಯ್ಯ ಅಲ್ಲಿಂದ ಹೇಗೋ ತಪ್ಪಿಸಿಕೊಂಡಿದ್ದ. ಅವನು ಬಂದು ಸ್ಥಳೀಯರಿಗೆ ತನ್ನ ಲಾರಿ ಚಾಲಕ ಅಪಾಯದಲ್ಲಿ ಸಿಲುಕಿದ್ದನ್ನು ಎಲ್ಲರಿಗೂ ಬಂದು ಹೇಳಿದ್ದ.
ಮರದ ಮೇಲಿದ್ದ ಲಾರಿ ಚಾಲಕನನ್ನು ರಕ್ಷಿಸಲು ಹೆಲಿಕಾಪ್ಟರ್'ನಿಂದ ಮಾತ್ರ ಸಾಧ್ಯವಾಗಿತ್ತು. ಆದರೆ ಪ್ರತಿಕೂಲ ಹವಾಮಾನದಿಂದಾಗಿ ಹೆಲಿಕಾಪ್ಟರ್ ಬರಲು ತಡವಾಗಿತ್ತು. ಅದಾಗಲೇ NDRF ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಲಾರಿ ಚಾಲಕನನ್ನು ಮರದಿಂದ ಬೇರೆಡೆಗೆ ಸ್ಥಳಾಂತರಿಸಲು ಹರಸಾಹಸಪಟ್ಟರು. ಆದರೂ ಕೂಡ ಇದು ಸಾಧ್ಯವಾಗಲಿಲ್ಲ. ಪ್ರವಾಹ ಒಂದೇಸಮನೆ ಎರುತ್ತಾ ನೀರು ಕೂಡ ಒಂದೇ ಸಮನೆ ಹೆಚ್ಚಾಗುತ್ತಾ ಹೋಗಿ ಆ ಪ್ರವಾಹದ ನೀರಿನಲ್ಲಿ ಲಾರಿ ಚಾಲಕ ಕೊಚ್ಚಿಕೊಂಡು ಹೋದನು.
ಸದ್ಯ ಎನ್ಡಿಆರ್ಎಫ್ ಸಿಬ್ಬಂದಿಗಳು ಈಗ ಲಾರಿ ಚಾಲಕನ ಮೃತದೇಹದ ಹುಡುಕಾಟವನ್ನು ನಡೆಸುತ್ತಿದ್ದಾರೆ .