ಬೆಂಗಳೂರು, ಮೇ 27: ರಾಜಸ್ಥಾನ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ಬೆಳೆಗಳನ್ನು ನಾಶಪಡಿಸಿದ ಮಿಡತೆಗಳ ಹಿಂಡುಗಳು ಮಹಾರಾಷ್ಟ್ರಕ್ಕೆ ತೆರಳುತ್ತಿವೆ. ಅದರ ನಂತರ ಮಿಡತೆಗಳು ಕರ್ನಾಟಕಕ್ಕೆ ಪ್ರವೇಶಿಸಿ ಇಲ್ಲಿನ ರೈತರಿಗೆ ಭಾರಿ ನಷ್ಟವನ್ನುಂಟು ಮಾಡುವ ಸಾಧ್ಯತೆಯಿದೆ.
ಲಕ್ಷಾಂತರ ಮಿಡತೆಗಳು ಈಗ ಮಹಾರಾಷ್ಟ್ರದ ವಿದರ್ಭ ಪ್ರದೇಶದ ಮೇಲೆ ದಾಳಿ ಮಾಡಿವೆ. ಮಹಾರಾಷ್ಟ್ರಕ್ಕೆ ಸಮೀಪದಲ್ಲಿರುವ ಕರ್ನಾಟಕ ಜಿಲ್ಲೆಗಳ ಮೇಲೆ ಹಿಂಡುಗಳು ದಾಳಿ ಮಾಡುವ ಅಪಾಯದ ಬಗ್ಗೆ ಕೃಷಿ ತಜ್ಞರು ಎಚ್ಚರಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರವು ಮಿಡತೆಗಳ ಭೀತಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸಿದರೆ ಮಾತ್ರ ಕರ್ನಾಟಕಕ್ಕೆ ಮಿಡತೆಗಳ ಪ್ರವೇಶ ಸ್ಥಗಿತಗೊಳ್ಳುತ್ತದೆ.
ಹಲವಾರು ಲಕ್ಷಗಳ ಮಿಡತೆಗಳು ಈಗಾಗಲೇ ಅನೇಕ ಹಳ್ಳಿಗಳಲ್ಲಿ ನಿಂತಿರುವ ಬೆಳೆಗಳನ್ನು ನಾಶಪಡಿಸಿವೆ. ಇವುಗಳು ಆಂಧ್ರಪ್ರದೇಶದ ಅಮರಾವತಿ ಮೂಲಕ ಮಹಾರಾಷ್ಟ್ರಕ್ಕೆ ಪ್ರವೇಶಿಸಿವೆ. ಅವುಗಳನ್ನು ನಿಯಂತ್ರಿಸಲು ಈ ಪ್ರದೇಶಗಳಲ್ಲಿ ರಾಸಾಯನಿಕಗಳನ್ನು ಸಿಂಪಡಿಸಿದ್ದರೂ ಅವು ಪರಿಣಾಮಕಾರಿಯಾಗಿರಲಿಲ್ಲ.
ಪಾಕಿಸ್ತಾನ ಗಡಿಗೆ ಸಮೀಪದಲ್ಲಿರುವ ಪಂಜಾಬ್ ಮತ್ತು ಹರಿಯಾಣ ಕೂಡ ಮಿಡತೆ ದಾಳಿಗೆ ಒಳಗಾಗುವ ಅಪಾಯವನ್ನು ಎದುರಿಸುತ್ತಿವೆ.